ಜಪಾನ್ | ಅಂತ್ಯಕ್ರಿಯೆಯ ಶುಲ್ಕ ದುಬಾರಿಯೆಂದು ತಂದೆಯ ಮೃತದೇಹ ಎರಡು ವರ್ಷ ಬಚ್ಚಿಟ್ಟಿದ್ದ ಪುತ್ರ!

ನೊಬುಕಿಕೊ ಸುಝುಕಿ - photo courtesy of South China Morning Post
ಟೋಕಿಯೊ: ಅಂತ್ಯಕ್ರಿಯೆ ಶುಲ್ಕ ದುಬಾರಿಯಾಯಿತೆಂದು ತನ್ನ ತಂದೆಯ ಮೃತದೇಹವನ್ನು ಎರಡು ವರ್ಷಗಳ ಕಪಾಟಿನಲ್ಲಿ ಬಚ್ಚಿಟ್ಟಿದ್ದ ಆರೋಪದ ಮೇಲೆ 56 ವರ್ಷದ ರೆಸ್ಟೋರೆಂಟ್ ಮಾಲಕನೊಬ್ಬನನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೊಬುಕಿಕೊ ಸುಝುಕಿ ಎಂದು ಗುರುತಿಸಲಾಗಿದ್ದು, ಜನವರಿ 2023ರಲ್ಲಿ ಮೃತಪಟ್ಟಿದ್ದ ತನ್ನ 86 ವರ್ಷದ ತಂದೆಯ ಮೃತದೇಹವನ್ನು ಆತ ಕಪಾಟೊಂದರಲ್ಲಿ ಬಚ್ಚಿಟ್ಟಿದ್ದ ಎಂದು South China Morning Post ವರದಿ ಮಾಡಿದೆ.
ಆರೋಪಿ ನೊಬುಕಿಕೊ ಸುಝುಕಿಯು ಟೋಕಿಯೊದಲ್ಲಿರುವ ತನ್ನ ಚೈನೀಸ್ ರೆಸ್ಟೋರೆಂಟ್ ಅನ್ನು ಒಂದು ವಾರವಾದರೂ ತೆರೆಯದೆ ಇದ್ದುರಿಂದ ಅನುಮಾನಗೊಂಡ ನೆರೆಹೊರೆಯವರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಸುಝುಕಿಯನ್ನು ವಿಚಾರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಕಪಾಟೊಂದರಲ್ಲಿ ಅಸ್ಥಿಪಂಜರವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ನಾನು ನನ್ನ ತಂದೆಯ ಮೃತದೇಹವನ್ನು ಬಚ್ಚಿಟ್ಟಿದ್ದೆ ಎಂದು ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ನೊಬುಕಿಕೊ ಸುಝುಕಿ, ನಾನು ಮನೆಗೆ ಮರಳಿದಾಗ, ನನ್ನ ತಂದೆ ಮೃತಪಟ್ಟಿರುವುದನ್ನು ಕಂಡೆ. ಆದರೆ, ಅವರ ಅಂತ್ಯಕ್ರಿಯೆ ಶುಲ್ಕವನ್ನು ಪಾವತಿಸಲಾಗದೆ, ಅವರ ಮೃತದೇಹವನ್ನು ಬಚ್ಚಿಟ್ಟೆ ಎಂದು ಬಹಿರಂಗಪಡಿಸಿದ್ದಾನೆ.
ಆರೋಪಿ ನೊಬುಕಿಕೊ ಸುಝಕಿಯ ಈ ಹೇಳಿಕೆಯ ಹೊರತಾಗಿಯೂ, ಆತನ ತಂದೆ ಯಾವ ಸನ್ನಿವೇಶದಲ್ಲಿ ಮೃತಪಟ್ಟರು ಎಂಬ ಸಂಗತಿ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.
ಈ ಹಿಂದೆ ಜಪಾನ್ ನಲ್ಲಿ ಕೇಳಿ ಬಂದಿದ್ದ ಪಿಂಚಣಿಯನ್ನು ದುರುಪಯೋಗಪಡಿಸಿಕೊಳ್ಳಲು ಮೃತದೇಹಗಳನ್ನು ಬಚ್ಚಿಟ್ಟಿದ್ದ ಪ್ರಕರಣಗಳಂತೆಯೇ ಈ ಪ್ರಕರಣವೂ ಆಗಿರಬಹುದು ಎಂಬ ಆರೋಪಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.