ರಶ್ಯದ ವಿರುದ್ಧ ಅಮೆರಿಕದ ದೀರ್ಘಶ್ರೇಣಿಯ ಶಸ್ತ್ರಾಸ್ತ್ರ ಬಳಕೆ : ಉಕ್ರೇನ್ ಗೆ ಅವಕಾಶ ನೀಡಿದ ಜೋ ಬೈಡನ್

Update: 2024-11-18 14:46 GMT

 ಜೋ ಬೈಡನ್ | PC : PTI

ವಾಷಿಂಗ್ಟನ್: ರಶ್ಯದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಉಕ್ರೇನ್ ಮೇಲಿದ್ದ ನಿಷೇಧವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೆರವುಗೊಳಿಸಿರುವುದಾಗಿ ವರದಿಯಾಗಿದೆ.

ರಶ್ಯದೊಳಗೆ ಆಳವಾಗಿ ಪ್ರಹಾರ ನಡೆಸಲು ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್ ಗೆ ಅವಕಾಶ ನೀಡಲು ಬೈಡನ್ ಆಡಳಿತ ನಿರ್ಧರಿಸಿರುವುದಾಗಿ ಅಮೆರಿಕದ ಇಬ್ಬರು ಅಧಿಕಾರಿಗಳು ಹೇಳಿದ್ದು, ಇದು ಉಕ್ರೇನ್-ರಶ್ಯ ಸಂಘರ್ಷದಲ್ಲಿ ಅಮೆರಿಕದ ನೀತಿಯಲ್ಲಿನ ಗಮನಾರ್ಹ ಬದಲಾವಣೆಯನ್ನು ಸೂಚಿಸಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯದ ಪರ ಹೋರಾಡಲು ಉತ್ತರ ಕೊರಿಯಾ ಯೋಧರನ್ನು ರವಾನಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ರಶ್ಯ ವಿರುದ್ಧ ದೀರ್ಘ ಶ್ರೇಣಿಯ ಕ್ಷಿಪಣಿ ಬಳಸಲು ಅನುಮತಿ ನೀಡುವಂತೆ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ನಿರಂತರ ಒತ್ತಾಯಿಸುತ್ತಾ ಬಂದಿದ್ದರು. ಜನವರಿ 20ರಂದು ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುವುದಕ್ಕೆ ಎರಡು ತಿಂಗಳು ಮುನ್ನ ಬೈಡನ್ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ ` ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಇವತ್ತು ನಮಗೆ ಅನುಮತಿ ಸಿಕ್ಕಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಂತಹ ವಿಷಯಗಳನ್ನು ಘೋಷಿಸಲಾಗುವುದಿಲ್ಲ. ಮಾತಿನ ಮೂಲಕ ಪ್ರಹಾರ ನೀಡಲು ಸಾಧ್ಯವಿಲ್ಲ. ಕ್ಷಿಪಣಿಗಳೇ ಮಾತನಾಡುತ್ತವೆ' ಎಂದಿದ್ದಾರೆ. ದೀರ್ಘ ಶ್ರೇಣಿಯ ಕ್ಷಿಪಣಿ ಬಳಕೆಗೆ ಉಕ್ರೇನ್ ಗೆ ಅವಕಾಶ ನೀಡುವುದು ಪ್ರಮುಖ ಉಲ್ಬಣಕ್ಕೆ ಕಾರಣವಾಗಲಿದೆ ಎಂದು ರಶ್ಯ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು.

ಪ್ರಥಮ ಹಂತದಲ್ಲಿ ಉಕ್ರೇನ್ 306 ಕಿ.ಮೀ ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯವಿರುವ ಎಟಿಎಸಿಎಂಎಸ್ ರಾಕೆಟ್ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ರಶ್ಯ ಆಕ್ರಮಿತ ಉಕ್ರೇನ್ ನ ಪ್ರದೇಶದಲ್ಲಿ ರಶ್ಯ ಪಡೆಗಳ ವಿರುದ್ಧ ಉಕ್ರೇನ್ ಈ ಕ್ಷಿಪಣಿಗಳನ್ನು ಕಳೆದ ಒಂದು ವರ್ಷದಿಂದ ಬಳಸುತ್ತಿದೆ.

ದೀರ್ಘ ಶ್ರೇಣಿಯ ಪ್ರಹಾರಕ್ಕೆ ಅನುಮತಿಸುವುದು ಯುದ್ಧದ ಒಟ್ಟು ಪಥವನ್ನು ಬದಲಾಯಿಸಬಹುದು. ರಶ್ಯದ ಪಡೆಗಳು ಮುನ್ನಡೆ ಸಾಧಿಸುತ್ತಿರುವ ಹಂತದಲ್ಲಿ ಈ ನಿರ್ಧಾರವು ಉಕ್ರೇನ್ ಗೆ ವರದಾನವಾಗಲಿದೆ ಮತ್ತು ಕದನ ವಿರಾಮ ಮಾತುಕತೆಯ ಸಂದರ್ಭ ಚೌಕಾಶಿಯ ಸಾಮರ್ಥ್ಯ ಒದಗಿಸುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ರಶ್ಯ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಗೆ ಅಮೆರಿಕದ ದೀರ್ಘಶ್ರೇಣಿಯ ಕ್ಷಿಪಣಿ ಬಳಕೆಗೆ ಅವಕಾಶ ನೀಡುವಂತೆ ಕೆಲವು ರಿಪಬ್ಲಿಕನ್ ಸಂಸದರು ಬೈಡನ್ ರನ್ನು ನಿರಂತರ ಆಗ್ರಹಿಸುತ್ತಾ ಬಂದಿದ್ದಾರೆ. ` ಗುರಿಯ ನಿರ್ಬಂಧಗಳನ್ನು ತೆಗೆದು ಹಾಕುವುದರಿಂದ ಉಕ್ರೇನಿಯನ್ನರು ಒಂದು ಕೈಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಹೋರಾಡುವುದನ್ನು ನಿಲ್ಲಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದರೆ ಈ ನಿರ್ಧಾರ ತುಂಬಾ ತಡವಾಗಿ ಬಂದಿದೆ. ಅಮೆರಿಕದ ಎಟಿಎಸಿಎಂಎಸ್, ಎಚ್ಐಎಂಆರ್ಎಸ್ ಕ್ಷಿಪಣಿ, ಬ್ರಾಡ್ಲೆ ಮತ್ತು ಅಬ್ರಹಾಂ ಟ್ಯಾಂಕ್ಗಳು ಮತ್ತು ಎಫ್-16 ಯುದ್ಧವಿಮಾನಗಳು ಈ ಹಿಂದೆಯೇ ಕಣಕ್ಕೆ ಇಳಿಯಬೇಕಿತ್ತು. ಈ ಪ್ರಥಮ ಹಂತವು ರಶ್ಯ ಅಧ್ಯಕ್ಷ ಪುಟಿನ್ ಮೇಲೆ ಒತ್ತಡ ಹೇರಲಿದೆ ಮತ್ತು ತ್ವರಿತವಾಗಿ ಯುದ್ಧ ಅಂತ್ಯಗೊಳಿಸುವ ಚುನಾಯಿತ ಅಧ್ಯಕ್ಷ ಟ್ರಂಪ್ ಅವರ ಆಶಯಕ್ಕೆ ಪೂರಕವಾಗಲಿದೆ' ಎಂದು ರಿಪಬ್ಲಿಕನ್ ಸಂಸದ, ಸಂಸತ್ ನ ಗುಪ್ತಚರ ಸ್ಥಾಯೀ ಸಮಿತಿ ಅಧ್ಯಕ್ಷ ಮೈಕ್ ಟರ್ನರ್ ಪ್ರತಿಕ್ರಿಯಿಸಿದ್ದಾರೆ.

ಉಕ್ರೇನ್ ನ ಇತರ ಮಿತ್ರದೇಶಗಳೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರೂ ಅದರ ಬಳಕೆಯ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಿವೆ. ರಶ್ಯದ ವಿರುದ್ಧ ಉಕ್ರೇನ್ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಿದರೆ ರಶ್ಯದ ಪ್ರತೀಕಾರ ಕ್ರಮದಿಂದಾಗಿ ಸಂಘರ್ಷವು ನೇಟೊ ರಾಷ್ಟ್ರಗಳಿಗೂ ವಿಸ್ತರಿಸಬಹುದು ಎಂಬ ಆತಂಕವೂ ಇದೆ.

► ಬೈಡನ್ ನಿರ್ಧಾರಕ್ಕೆ ಟ್ರಂಪ್ ತಡೆ ಸಾಧ್ಯತೆ

ಮುಂದಿನ ವರ್ಷದ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಟ್ರಂಪ್ ಬೈಡನ್ ಆಡಳಿತ ಕೈಗೊಂಡ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆಯಿದೆ. ಉಕ್ರೇನ್ ಗೆ ಅಮೆರಿಕ ಭಾರೀ ಪ್ರಮಾಣದಲ್ಲಿ ಆರ್ಥಿಕ ಮತ್ತು ಮಿಲಿಟರಿ ನೆರವು ಒದಗಿಸುತ್ತಿರುವುದನ್ನು ಈ ಹಿಂದಿನಿಂದಲೂ ಟೀಕಿಸುತ್ತಾ ಬಂದಿದ್ದ ಟ್ರಂಪ್, ಉಕ್ರೇನ್ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ.

ಬೈಡನ್ ನಿರ್ಧಾರವನ್ನು ಟ್ರಂಪ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ರಿಚರ್ಡ್ ಗ್ರೆನೆಲ್ ಟೀಕಿಸಿದ್ದಾರೆ. `ಹುದ್ದೆಯಿಂದ ನಿರ್ಗಮಿಸುವ ಮುನ್ನ ಅವರು(ಬೈಡನ್ ಆಡಳಿತ) ಯುದ್ಧವನ್ನು ಉಲ್ಬಣಿಸುತ್ತಿದ್ದಾರೆ' ಎಂದು ಗ್ರೆನೆಲ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ತಂದೆಗೆ ಶಾಂತಿ ಸ್ಥಾಪಿಸಲು ಮತ್ತು ಜೀವಗಳನ್ನು ಉಳಿಸಲು ಅವಕಾಶ ಸಿಗುವ ಮೊದಲು ಮೂರನೇ ಮಹಾಯುದ್ಧ ನಡೆಯುವುದನ್ನು ಖಚಿತ ಪಡಿಸಲು ಅವರು (ಬೈಡನ್ ಆಡಳಿತ) ಬಯಸಿರುವಂತೆ ಕಾಣುತ್ತದೆ ಎಂದು ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಬೈಡನ್ ರಿಂದ ಮೂರನೇ ವಿಶ್ವಯುದ್ಧದ ಅಪಾಯ: ರಶ್ಯ ಎಚ್ಚರಿಕೆ

ರಶ್ಯದ ವಿರುದ್ಧ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಉಕ್ರೇನ್ ಗೆ ಅವಕಾಶ ಮಾಡಿಕೊಡುವ ಬೈಡನ್ ಆಡಳಿತದ ನಿರ್ಧಾರವು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ರಶ್ಯದ ಸಂಸದೆ ಮರಿಯಾ ಬುಟೀನಾ ಹೇಳಿದ್ದಾರೆ.

ತಮ್ಮ ಮಿಕ್ಕುಳಿದ ಅಧಿಕಾರಾವಧಿಯಲ್ಲಿ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಉಲ್ಬಣಿಸಲು ಬೈಡನ್ ಆಡಳಿತ ಪ್ರಯತ್ನಿಸುತ್ತಿದೆ. ಈ ನಿರ್ಧಾರವನ್ನು ಟ್ರಂಪ್ ರದ್ದುಗೊಳಿಸುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಯಾಕೆಂದರೆ ಮೂರನೇ ಮಹಾ ಯುದ್ಧ ಆರಂಭಗೊಳ್ಳುವುದನ್ನು ಯಾರೂ ಬಯಸುತ್ತಿಲ್ಲ' ಎಂದವರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

`ಮೂರನೇ ಮಹಾ ಯುದ್ಧದ ಅಪಾಯ ಅಮೆರಿಕದಿಂದ ಎದುರಾಗಿದೆ. ಉಕ್ರೇನ್ ರಾಷ್ಟ್ರದ ಅಸ್ತಿತ್ವ ರಾತ್ರಿ ಬೆಳಗಾಗುವುದರೊಳಗೆ ಸಂಪೂರ್ಣ ಅವಶೇಷಗಳಾಗಿ ಕೊನೆಗೊಳ್ಳುವಷ್ಟರ ಮಟ್ಟಿಗೆ ಉಲ್ಬಣವನ್ನು ಹೆಚ್ಚಿಸುವುದು ಪಾಶ್ಚಿಮಾತ್ಯರ ಉದ್ದೇಶವಾಗಿದೆ' ಎಂದು ರಶ್ಯ ಸಂಸತ್ ನ ಮೇಲ್ಮನೆಯ ಅಂತರಾಷ್ಟ್ರೀಯ ವ್ಯವಹಾರಗಳ ಸ್ಥಾಯೀ ಸಮಿತಿಯ ಉಪಾಧ್ಯಕ್ಷ ವ್ಲಾದಿಮಿರ್ ಝಬರೋವ್ ಹೇಳಿದ್ದಾರೆ.

ಇದು ಮೂರನೇ ವಿಶ್ವಯುದ್ಧ ಆರಂಭದ ಕಡೆಗಿನ ದೊಡ್ಡ ಹೆಜ್ಜೆಯಾಗಿದೆ ಮತ್ತು ನಾವು ತಕ್ಷಣ ಪ್ರತಿಕ್ರಮ ಕೈಗೊಳ್ಳಲಿದ್ದೇವೆ' ಎಂದವರು ಹೇಳಿರುವುದಾಗಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News