ಯುದ್ಧದ ನಿಯಮಗಳನ್ನು ಪಾಲಿಸಿ: ಇಸ್ರೇಲ್ ಗೆ ಬೈಡನ್ ಆಗ್ರಹ

Update: 2023-10-12 18:54 GMT

ಜೋ ಬೈಡನ್ | Photo: PTI

ವಾಷಿಂಗ್ಟನ್: ಯುದ್ಧದ ನಿಯಮಗಳನ್ನು ಪಾಲಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಆಗ್ರಹಿಸಿದ್ದಾರೆ.

ಹಮಾಸ್ ಅನ್ನು ನಾಶಗೊಳಿಸುವುದಾಗಿ ಪ್ರತಿಜ್ಞೆ ಮಾಡಿರುವ ನೆತನ್ಯಾಹುಗೆ ಬುಧವಾರ ಕರೆ ಮಾಡಿದ ಬೈಡನ್ , ಹಮಾಸ್ ದಾಳಿಗೆ ಪ್ರತೀಕಾರ ತೀರಿಸಲು ಇಸ್ರೇಲ್ ಗೆ ಸರ್ವ ನೆರವು ಒದಗಿಸುವುದಾಗಿ ವಾಗ್ದಾನ ಮಾಡಿದರು. ಜತೆಗೆ ವಿಮಾನ ವಾಹಕ ನೌಕೆಯನ್ನು ಅಮೆರಿಕ ಇಸ್ರೇಲ್ ಗೆ ರವಾನಿಸಿದೆ. ಬುಧವಾರ ಶ್ವೇತಭವನದಲ್ಲಿ ಅಮೆರಿಕನ್ ಯೆಹೂದಿ ಸಮುದಾಯದ ಮುಖಂಡರ ಜತೆ ಮಾತುಕತೆ ನಡೆಸಿದ ಬೈಡನ್ ‘ ಶನಿವಾರದ ದಾಳಿ ಯೆಹೂದಿಗಳಿಗೆ ಹತ್ಯಾಕಾಂಡದ ಬಳಿಕದ ಅತ್ಯಂತ ಮಾರಣಾಂತಿಕ ಆಘಾತವಾಗಿದೆ’ ಎಂದರು. ಇಸ್ರೇಲ್ ನ ಆಕ್ರೋಶ ಮತ್ತು ಹತಾಶೆ ವಿಶ್ವಕ್ಕೇ ತಿಳಿದಿದೆ. ಆದರೆ ಇಲ್ಲಿ ಯುದ್ಧದ ನಿಯಮ ಎಂಬುದಿದೆ. ಅದನ್ನು ಪಾಲಿಸುವುದು ಅತ್ಯಗತ್ಯವಾಗಿದೆ’ ಎಂದು ಬೈಡನ್ ಹೇಳಿದ್ದಾರೆ.

ಇದೇ ಸಂದರ್ಭ ಹಮಾಸ್ ಮತ್ತು ಲೆಬನಾನಿನ ಹಿಜ್ಬುಲ್ಲಾ ಗುಂಪನ್ನು ಬೆಂಬಲಿಸುತ್ತಿರುವ ಇರಾನ್ ಗೆ ಬೈಡನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈ ಮಧ್ಯೆ, ಗುರುವಾರ ಇಸ್ರೇಲ್ ಗೆ ಭೇಟಿ ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ‘ಅಮೆರಿಕದ ಅತೀ ದೊಡ್ಡ ವಿಮಾನವಾಹಕ ಯುದ್ಧನೌಕೆ ಜೆರಾಲ್ಡ್ ಆರ್. ಫೋರ್ಡ್ ಇಸ್ರೇಲ್ ನತ್ತ ಸಾಗುತ್ತಿದೆ. ಅಗತ್ಯಬಿದ್ದರೆ ಮತ್ತೊಂದು ವಿಮಾನವಾಹಕ ಯುದ್ಧನೌಕೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ’ ಎಂದಿದ್ದಾರೆ. ಬ್ಲಿಂಕೆನ್ ಜೋರ್ಡಾನ್ ಮತ್ತು ಫೆಲೆಸ್ತೀನ್ ಅಧಿಕಾರಿಗಳನ್ನೂ ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.  

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News