ಜೋರ್ಡಾನ್ | ಇಸ್ರೇಲ್ ದೂತಾವಾಸದ ಬಳಿ ಗುಂಡಿನ ದಾಳಿ; 3 ಪೊಲೀಸರಿಗೆ ಗಾಯ
ಅಮ್ಮಾನ್ : ಜೋರ್ಡಾನ್ ರಾಜಧಾನಿ ಅಮ್ಮಾನ್ ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ರವಿವಾರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಹತ್ಯೆ ಮಾಡಿರುವುದಾಗಿ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಪೆಟ್ರಾ' ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮ್ಮಾನ್ ನ ನೆರೆಹೊರೆಯ ರಬಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಶೂಟೌಟ್‍ನಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ದುಷ್ಕರ್ಮಿಯನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ಹತ್ಯೆ ಮಾಡಿದ್ದಾರೆ. ಘಟನೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಭದ್ರತಾ ಮೂಲಗಳು ಹೇಳಿವೆ. `ದೇಶದಲ್ಲಿನ ಭದ್ರತಾ ಪಡೆಗಳನ್ನು ಗುರಿಯಾಗಿಸಿದ ಭಯೋತ್ಪಾದಕ ದಾಳಿ ಇದಾಗಿದ್ದು, ಭದ್ರತಾ ಪಡೆಗಳ ಮೇಲಿನ ದಾಳಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ದಾಳಿ ನಡೆಸಿದ್ದ ವ್ಯಕ್ತಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಜೋರ್ಡಾನ್ ನ ಸಂವಹನ ಸಚಿವ ಮುಹಮ್ಮದ್ ಮೊಮಾನಿ ಹೇಳಿದ್ದಾರೆ.