ಕಾಶ್ಮೀರ ವಿವಾದ ಭಾರತದೊಂದಿಗೆ ವ್ಯಾಪಕ ಯುದ್ಧಕ್ಕೆ ಕಾರಣವಾಗಬಹುದು: ಪಾಕ್ ಎಚ್ಚರಿಕೆ

PC : PTI
ಇಸ್ಲಮಾಬಾದ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ವಿವಾದವು ಪಾಕಿಸ್ತಾನ-ಭಾರತ ನಡುವೆ ವ್ಯಾಪಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ `ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವಿನ ಪೂರ್ಣ ಪ್ರಮಾಣದ ಸಂಘರ್ಷದ ಸಂಭಾವ್ಯತೆ ಜಾಗತಿಕ ಸಮುದಾಯದ ಕಳವಳಕ್ಕೆ ಕಾರಣವಾಗಲಿದೆ. ಆದರೆ ವಿವಾದವು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯೂ ಇದೆ' ಎಂದು ಹೇಳಿದ್ದಾರೆ.
ಕಾಶ್ಮೀರ ಪ್ರದೇಶದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿ ಪಾಕಿಸ್ತಾನದ ಮೇಲೆ ಗೂಬೆ ಕೂರಿಸಲು ಪಹಲ್ಗಾಮ್ ಭಯೋತ್ಪಾದಕರ ದಾಳಿ ಎಂಬುದನ್ನು ಭಾರತವೇ ಸೃಷ್ಟಿಸಿದೆ ಎಂದು ಆರೋಪಿಸಿದ ಖ್ವಾಜಾ ಆಸಿಫ್, ದಾಳಿಯ ಹೊಣೆ ವಹಿಸಿಕೊಂಡಿದೆ ಎನ್ನಲಾದ `ದಿ ರೆಸಿಸ್ಟೆನ್ಸ್ ಫ್ರಂಟ್(ಲಷ್ಕರೆ ತೈಬಾದ ಅಂಗಸಂಸ್ಥೆ) ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಪ್ರತಿಪಾದಿಸಿದರು.
ಪ್ರತೀ ಬಾರಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಅವರು ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ದಾಳಿ ನಡೆಸಿದೆ ಎನ್ನಲಾದ ಗುಂಪಿನ ಬಗ್ಗೆ ಇದುವರೆಗೆ ಯಾರಿಗೂ ಯಾವುದೇ ಮಾಹಿತಿಯಿಲ್ಲ. ಲಷ್ಕರೆ ತೈಬಾ ಎಂಬುದು ಭೂತಕಾಲದ ಹೆಸರು. ಅದು ಈಗ ಅಸ್ತಿತ್ವದಲ್ಲಿಲ್ಲ' ಎಂದು ಖ್ವಾಜಾ ಆಸಿಫ್ ಪ್ರತಿಪಾದಿಸಿದ್ದಾರೆ.