ಕುಲಭೂಷಣ್ ಜಾಧವ್ ಗೆ ಮೇಲ್ಮನವಿ ಹಕ್ಕು ನಿರಾಕರಣೆ
ಇಸ್ಲಮಾಬಾದ್: ಭಾರತದ ಗುಪ್ತಚರ ಇಲಾಖೆಯ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಸೆರೆವಾಸ ಅನುಭವಿಸುತ್ತಿರುವ ಭಾರತದ ಪ್ರಜೆ ಕುಲ ಭೂಷಣ್ ಜಾಧವ್ ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನಿರಾಕರಿಸಿರುವುದಾಗಿ ಸುಪ್ರೀಂಕೋರ್ಟ್ ಗೆ ಪಾಕಿಸ್ತಾನದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
2019ರ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಯ ಆದೇಶದಲ್ಲಿ ಕಾನ್ಸುಲರ್ ನೆರವು ಪಡೆಯಲು ಅವಕಾಶ ಕಲ್ಪಿಸಲು ಮಾತ್ರ ಸೂಚಿಸಿರುವುದರಿಂದ ಮೇಲ್ಮನವಿ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಲಾಗಿದೆ.
ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನಿ ಪ್ರಜೆಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ರೀತಿಯಲ್ಲಿಯೇ ಕುಲ ಭೂಷಣ್ ಜಾಧವ್ ಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ರಕ್ಷಣಾ ಇಲಾಖೆಯ ಪರ ವಕೀಲರು ಈ ವಾದ ಮಂಡಿಸಿರುವುದಾಗಿ `ಡಾನ್' ವರದಿ ಮಾಡಿದೆ. 2017ರಲ್ಲಿ ಕುಲ ಭೂಷಣ್ ಜಾಧವ್ ಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕುಲ ಭೂಷಣ್ ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆಗೆ ಅವಕಾಶ ನೀಡುವ ಜವಾಬ್ದಾರಿಯನ್ನು ಪಾಕಿಸ್ತಾನ ಹೊಂದಿದೆ ಎಂದು 2019ರಲ್ಲಿ ಐಸಿಜೆ ತೀರ್ಪು ನೀಡಿತ್ತು.