ಕೆನಡಾ | ಲಾಪು ಲಾಪು ಉತ್ಸವದ ವೇಳೆ ಜನರ ಗುಂಪಿನ ಮೇಲೆ ನುಗ್ಗಿದ ಕಾರು : ಕನಿಷ್ಠ 9 ಮಂದಿ ಮೃತ್ಯು

Photo | Reuters
ಒಟ್ಟಾವಾ : ಕೆನಡಾದ ವ್ಯಾಂಕೋವರ್‌ನಲ್ಲಿ ಲಾಪು ಲಾಪು ಉತ್ಸವದ ವೇಳೆ ಚಾಲಕನೋರ್ವ ಜನರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ವ್ಯಾಂಕೋವರ್‌ನಲ್ಲಿ ಫಿಲಿಪಿನೋ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಲಾಪು ಲಾಪು ದಿನವನ್ನು ಆಚರಿಸಲು ಜಮಾಯಿಸಿದ್ದರು. ಈ ವೇಳೆ ಘಟನೆ ನಡೆದಿದೆ.
ʼಶನಿವಾರ ರಾತ್ರಿ 8 ಗಂಟೆ ಸುಮಾರಿಗೆ 41ನೇ ಅವೆನ್ಯೂ ಮತ್ತು ಫ್ರೇಸರ್‌ನಲ್ಲಿ ಬೀದಿ ಉತ್ಸವದ ವೇಳೆ ಚಾಲಕನೋರ್ವ ಕಾರು ನುಗ್ಗಿಸಿದ ಪರಿಣಾಮ ಕನಿಷ್ಠ 9 ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ತನಿಖೆಯ ಬಳಿಕ ಈ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆʼ ಎಂದು ವ್ಯಾಂಕೋವರ್ ಪೊಲೀಸರು ತಿಳಿಸಿದ್ದಾರೆ.
ವರದಿ ಪ್ರಕಾರ, ಕಪ್ಪು SUV ಕಾರು ಜನಸಂದಣಿಯೆಡೆಗೆ ನುಗ್ಗಿದೆ. ಢಿಕ್ಕಿಯಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರು ಚಾಲಕ ಏಷ್ಯಾ ಮೂಲದ ಯುವಕನಾಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.