ಫೆಲಸ್ತೀನ್ ಗೆ ಮ್ಯಾಕ್ರೋನ್ ಬೆಂಬಲ: 27 ಫ್ರಾನ್ಸ್ ಸಂಸದರ ವೀಸಾ ರದ್ದುಪಡಿಸಿದ ಇಸ್ರೇಲ್

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ PC: x.com/QudsNen
ಪ್ಯಾರೀಸ್: ಇಸ್ರೇಲ್ ಮತ್ತು ಫೆಲಸ್ತೀನ್ ಭಾಗಕ್ಕೆ ನೀಡಲು ಉದ್ದೇಶಿಸಿದ್ದ ಭೇಟಿಗೆ ಎರಡು ದಿನ ಮೊದಲು ಫ್ರಾನ್ಸ್ ನ 27 ಸಂಸದರಿಗೆ ನೀಡಿದ್ದ ವೀಸಾವನ್ನು ಇಸ್ರೇಲ್ ರದ್ದುಪಡಿಸಿದೆ. ಅವರ ಪ್ರವೇಶ ವೀಸಾವನ್ನು ರದ್ದುಪಡಿಸಲಾಗಿದೆ ಎಂದು ರವಿವಾರ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಫ್ರಾನ್ಸ್ ನ ಎಡಪಂಥೀಯ ಪರಿಸರವಾದಿ ಮತ್ತು ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು ಸೇರಿದಂತೆ 27 ಮಂದಿಯ ನಿಯೋಗ ಅಂತಾರಾಷ್ಟ್ರೀಯ ಸಹಕಾರ ಮತ್ತು ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಿತ್ತು ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಜೆರುಸಲೇಂನಲ್ಲಿರುವ ಫ್ರಾನ್ಸ್ ಕಾನ್ಸುಲೇಟ್ ಕಚೇರಿ ಈ ಐದು ದಿನಗಳ ಅಧಿಕೃತ ಪ್ರವಾಸವನ್ನು ಆಯೋಜಿಸಿತ್ತು. ಆದರೆ ಇಸ್ರೇಲ್ ನ ರಕ್ಷಣಾ ಸಚಿವಾಲಯ, ದೇಶದ ಹಿತಾಸಕ್ತಿಗೆ ಅಪಾಯ ಎಂದು ಪರಿಗಣಿಸುವ ವ್ಯಕ್ತಿಗಳ ವೀಸಾ ರದ್ದುಪಡಿಸುವ ಕಾನೂನಿನ ಅಡಿಯಲ್ಲಿ ಇವರ ವೀಸಾ ರದ್ದುಪಡಿಸಿದೆ.
ವೀಸಾ ರದ್ದುಗೊಂಡ ಸಂಸದರ ಪೈಕಿ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿಗಳಾದ ಫ್ರಾಂಕೋಯಿಸ್ ರುಫಿನ್, ಅಲೆಕ್ಸಿಸ್ ಕೊರ್ಬೀರ್, ಜ್ಯೂಲಿ ಒಝೆನ್, ಕಮ್ಯುನಿಸ್ಟ್ ಡೆಪ್ಯುಟಿ ಸೌಮ್ಯಾ ಬೊರೋಹಾ ಮತ್ತು ಸೆನೆಟರ್ ಮರಿಯನ್ ಮಾರ್ಗರೆಟ್ ಸೇರಿದ್ದಾರೆ. ನಿಯೋಗದ ಇತರ ಸದಸ್ಯರಲ್ಲಿ ಮೇಯರ್ ಗಳು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದ್ದರು. ಇದನ್ನು "ಸಂಘಟಿತ ಶಿಕ್ಷೆ" ಎಂದು ಫ್ರಾನ್ಸ್ ಸಂಸದರು ಬಣ್ಣಿಸಿದ್ದು, ರಾಜತಾಂತ್ರಿಕ ಸಂಬಂಧದ ಪ್ರಮುಖ ಬಿಕ್ಕಟ್ಟು ಎಂದು ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಅಧ್ಯಕ್ಷರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಇಸ್ರೇಲ್ ತನ್ನ ನಿರ್ಧಾರವನ್ನು ಪರಿಷ್ಕರಿಸುವಂತೆ ಮಾಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ. ತಮ್ಮ ಪಕ್ಷಗಳು ಫೆಲಸ್ತೀನ್ ಗೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದು, ಅಧ್ಯಕ್ಷ ಮ್ಯಾಕ್ರೋನ್ ಕೂಡಾ ಇದಕ್ಕೆ ಬೆಂಬಲ ಸೂಚಿಸಿದ್ದರು. ಫೆಲಸ್ತೀನನ್ನು ಮುಂದಿನ ಜೂನ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಶೃಂಗದಲ್ಲೇ ಪ್ರತ್ಯೇಕ ದೇಶವಾಗಿ ಮಾನ್ಯತೆ ನೀಡಲಿದೆ ಎಂದು ಪ್ರಕಟಿಸಿದ್ದರು.