ಮಲೇಶ್ಯಾ: ಬಂಧನ ಕೇಂದ್ರದಿಂದ 115 ರೊಹಿಂಗ್ಯಾಗಳ ಪಲಾಯನ

Update: 2024-02-02 16:49 GMT

ಸಾಂದರ್ಭಿಕ ಚಿತ್ರ 

ಕೌಲಲಾಂಪುರ: ಮಲೇಶ್ಯಾದ ಬಂಧನ ಕೇಂದ್ರದಲ್ಲಿ ಗಲಭೆ ಭುಗಿಲೆದ್ದ ಬಳಿಕ 115 ರೊಹಿಂಗ್ಯಾ ನಿರಾಶ್ರಿತರು ಅಲ್ಲಿಂದ ಪಲಾಯನ ಮಾಡಿದ್ದು, ಹೆದ್ದಾರಿಯಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದ ಸಂದರ್ಭ ವಾಹನ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ತಾಯ್ನಾಡು ಮ್ಯಾನ್ಮಾರ್‌ ನಲ್ಲಿ ಶೋಷಣೆಗೆ ಒಳಗಾದ ರೊಹಿಂಗ್ಯಾಗಳಲ್ಲಿ ಹಲವರು ಮುಸ್ಲಿಂ ಬಹುಸಂಖ್ಯಾತ ಮಲೇಶ್ಯಾ ಅಥವಾ ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ಸಣ್ಣ ದೋಣಿಗಳ ಮೂಲಕ ಸಮುದ್ರದಲ್ಲಿ ದೀರ್ಘಾವಧಿಯ ಅಪಾಯಕಾರಿ ಪ್ರಯಾಣ ನಡೆಸಿ ಅಥವಾ ಥೈಲ್ಯಾಂಡ್ ಜತೆಗಿನ ಗಡಿಯ ಮೂಲಕ ಒಳನುಸುಳಿ ಮಲೇಶ್ಯಾ ತಲುಪುತ್ತಿದ್ದಾರೆ. ಒಂದು ವೇಳೆ ಸಿಕ್ಕಿಬಿದ್ದರೆ ಇವರನ್ನು ಅಧಿಕಾರಿಗಳು ಬಂಧನ ಕೇಂದ್ರಕ್ಕೆ ಕಳುಹಿಸುತ್ತಾರೆ.

ಉತ್ತರ ಪ್ರಾಂತದ ಪೆರಾಕ್ ರಾಜ್ಯದಲ್ಲಿನ ಬಂಧನ ಕೇಂದ್ರದಲ್ಲಿ ಗುರುವಾರ ತಡರಾತ್ರಿ ಗಲಭೆ, ದೊಂಬಿ ನಡೆಸಿದ 115 ರೊಹಿಂಗ್ಯಾ ನಿರಾಶ್ರಿತರು ಹಾಗೂ ಇತರ 16 ಮಂದಿ ಕಟ್ಟಡದ ಗೋಡೆಹಾರಿ ತಪ್ಪಿಕೊಂಡಿದ್ದಾರೆ. ಪಲಾಯನ ಮಾಡಿದವರ ಪತ್ತೆ ಕಾರ್ಯಕ್ಕೆ ಪೊಲೀಸರು ಹಾಗೂ ಇತರ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ನಯೀಮ್ ಅಸ್ನಾವಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ನಾರ್ಥ್-ಸೌತ್ ಹೆದ್ದಾರಿಯಲ್ಲಿ ಕತ್ತಲೆಯಲ್ಲಿ ಪಲಾಯನ ಮಾಡುತ್ತಿದ್ದಾಗ ವಾಹನ ಡಿಕ್ಕಿಯಾಗಿ ಓರ್ವ ರೊಹಿಂಗ್ಯಾ ಸಾವನ್ನಪ್ಪಿದ್ದಾನೆ. ಸುಮಾರು 250 ಸಿಬಂದಿಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದೆ. ಇದುವರೆಗೆ 5 ನಿರಾಶ್ರಿತರನ್ನು ಬಂಧಿಸಲಾಗಿದೆ. ಸಮೀಪದ ಅರಣ್ಯ ಪ್ರದೇಶದಲ್ಲಿ ರೊಹಿಂಗ್ಯಾಗಳು ಅವಿತಿರುವ ಸಾಧ್ಯತೆಯಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News