ಮಲೇಶ್ಯಾ | 327 ಎಚ್ಎಂಪಿವಿ ಪ್ರಕರಣ ದಾಖಲು
ಕೌಲಲಾಂಪುರ: ಮಲೇಶ್ಯಾದಲ್ಲಿ 2024ರಲ್ಲಿ ಎಚ್ಎಂಪಿವಿ ಸೋಂಕಿನ 327 ಪ್ರಕರಣಗಳು ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 45%ದಷ್ಟು ಹೆಚ್ಚಳವಾಗಿದೆ ಎಂದು ದೇಶದ ಆರೋಗ್ಯ ಇಲಾಖೆ ವರದಿ ಮಾಡಿದೆ.
ಉಸಿರಾಟದ ಸಮಸ್ಯೆಗೆ ಸಂಬಂಧಿಸಿದ ಎಚ್ಎಂಪಿವಿ ಸೋಂಕು ಹೊಸ ರೋಗವಲ್ಲ. ಎಚ್ಎಂಪಿವಿ ಸೋಂಕಿತರು ಸಾಮಾನ್ಯವಾಗಿ ನೆಗಡಿಯಂತೆಯೇ ರೋಗ ಲಕ್ಷಣಗಳನ್ನು ಎದುರಿಸುತ್ತಾರೆ. ಆದರೆ ತೀವ್ರತರವಾದ ಪ್ರಕರಣಗಳಲ್ಲಿ ರೋಗಲಕ್ಷಣಗಳು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಪ್ರಗತಿ ಹೊಂದಬಹುದು. ವಿಶೇಷವಾಗಿ ಉಸಿರಾಟದ ಸೋಂಕುಗಳು ಸಮುದಾಯದಲ್ಲಿ ಅಸ್ತಿತ್ವದಲ್ಲಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಮುಖಕ್ಕೆ ಮಾಸ್ಕ್ ಧರಿಸಬೇಕು ಮತ್ತು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು ಎಂದು ಜನತೆಗೆ ಸಲಹೆ ನೀಡಿದೆ.
► ಎಚ್ಎಂಪಿವಿ | ಜಪಾನ್, ಹಾಂಕಾಂಗ್ನಲ್ಲಿ ಗರಿಷ್ಟ ಮುನ್ನೆಚ್ಚರಿಕೆ
ಜಪಾನ್ ನಲ್ಲಿ ಎಚ್ಎಂಪಿವಿ ಸೋಂಕಿನ ಪ್ರಕರಣದಲ್ಲಿ ಇದುವರೆಗೆ ಗಮನಾರ್ಹವಾದ ಉಲ್ಬಣ ವರದಿಯಾಗಿಲ್ಲ. ಆದರೆ ಶೀತಜ್ವರದಂತಹ ಸಾಂಕ್ರಾಮಿಕ ವೈರಸ್ ಸೋಂಕಿನ ಪ್ರಕರಣದಲ್ಲಿ ಹೆಚ್ಚಳ ದಾಖಲಾಗಿದ್ದು ಜನತೆ ಗರಿಷ್ಟ ಮುನ್ನೆಚ್ಚರಿಕೆ ವಹಿಸುವಂತೆ ದೇಶದ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜಪಾನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ ನ ವರದಿ ಪ್ರಕಾರ 2024ರ ಡಿಸೆಂಬರ್ 15ರಿಂದ 2025ರ ಜನವರಿ ಮೊದಲ ವಾರದವರೆಗೆ ಜಪಾನ್ ನಲ್ಲಿ 94,000ಕ್ಕೂ ಅಧಿಕ `ಇನ್ಫ್ಲುಯೆಂಝಾ' (ಶೀತ, ಜ್ವರದಂತಹ ಸಾಂಕ್ರಾಮಿಕ) ಪ್ರಕರಣ ವರದಿಯಾಗಿದೆ. ಎಚ್ಎಂಪಿವಿ ಪ್ರಕರಣಗಳು ಈಗ ನಿಯಂತ್ರಣದಲ್ಲಿದ್ದರೂ, ಆರೋಗ್ಯಾಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಹಾಂಕಾಂಗ್ನಲ್ಲಿ ಕಡಿಮೆ ಆದರೆ ಗಮನಾರ್ಹ ಪ್ರಮಾಣದಲ್ಲಿ ಎಚ್ಎಂಪಿವಿ ಸೋಂಕು ಪ್ರಕರಣಗಳು ದಾಖಲಾಗಿವೆ. ಈಗಾಗಲೇ ನೆರೆಯ ಪ್ರದೇಶಗಳಲ್ಲಿ ವೈರಸ್ ಹರಡುತ್ತಿರುವುದರಿಂದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುವ ದೇಶಗಳ ಪಟ್ಟಿಯಲ್ಲಿ ಹಾಂಕಾಂಗ್ ಕೂಡಾ ಸೇರಿದೆ.