ಇಸ್ರೇಲ್-ಹಮಾಸ್ ಕದನ: 16 ತಿಂಗಳುಗಳಲ್ಲಿ 46 ಸಾವಿರಕ್ಕೂ ಅಧಿಕ ಮಂದಿ ಬಲಿ
ಗಾಝಾ: ಇಸ್ರೇಲ್-ಹಮಾಸ್ ಯುದ್ಧವು 16ನೇ ತಿಂಗಳಿಗೆ ಕಾಲಿಸಿರಿಸುವಂತೆಯೇ ಈ ಭೀಕರ ಸಂಘರ್ಷದಲ್ಲಿ ಇದುವರೆಗೆ 46 ಸಾವಿರಕ್ಕೂ ಅಧಿಕ ಮಂದಿ ಫೆಲೆಸ್ತೀನಿಯರು ಮೃತಪಟ್ಟಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.
ಇಸ್ರೇಲ್-ಹಮಾಸ್ ಯುದ್ಧದಲ್ಲಿ 46,006 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಹಾಗೂ 1,09,378 ಮಂದಿ ಗಾಯಗೊಂಡಿದ್ದಾರೆ. ಯುದ್ಧದಲ್ಲಿ ಮೃತಪಟ್ಟವರಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚು ಮಂದಿ ಮಹಿಳೆಯರು ಮತ್ತು ಮಕ್ಕಳೆಂದು ಅದು ಹೇಳಿದೆ. ಆದರೆ ಮೃತರಲ್ಲಿ ಎಷ್ಟು ಮಂದಿ ಹೋರಾಟಗಾರರು ಅಥವಾ ನಾಗರಿಕರು ಎಂಬ ಬಗ್ಗೆ ಯಾವುದೇ ಸಂಖ್ಯೆಯನ್ನು ಅದು ನೀಡಿಲ್ಲ.
ತಾನು 17 ಸಾವಿರಕ್ಕೂ ಅಧಿಕ ಹಮಾಸ್ ಹೋರಾಟಗಾರರನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ನಾಗರಿಕರ ಸಾವುನೋವನ್ನು ತಪ್ಪಿಸಲು ಯತ್ನಿಸಿದ್ದೇನೆ. ಆದರೆ ಹಮಾಸ್ ವಸತಿ ಪ್ರದೇಶಗಳಿಂದಲೇ ಕಾರ್ಯಾಚರಿಸುತ್ತಿರುವುದರಿಂದ ಘರ್ಷಣೆಯಲ್ಲಿ ನಾಗರಿಕರು ಸಿಲುಕಿಕೊಳ್ಳುವಂತಾಗಿದೆ ಎಂದು ಅದು ಹೇಳಿದೆ. ಹಮಾಸ್ ಹೋರಾಟಗಾರರು ನಿರಾಶ್ರಿತ ಶಿಬಿರಗಳು ಹಾಗೂ ಆಸ್ಪತ್ರೆಗಳಲ್ಲಿ ಅವಿತುಕೊಳ್ಳುತ್ತಿರುವುದರಿಂದ ಅವರ ವಿರುದ್ಧ ಕಾರ್ಯಾಚರಣೆಯ ಸಂದರ್ಭ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.
2023ರ ಆಕ್ಟೋಬರ್ 7ರಂದು ಹಮಾಸ್ ಹೋರಾಟಗಾರರ ಗುಂಪು ಇಸ್ರೇಲ್‌ನ ಗಡಿಪ್ರದೇಶದ ಮೇಲೆ ದಾಳಿ ನಡೆಸಿದ ದಾಳಿಯಲ್ಲಿ 1200ಕ್ಕೂ ಅಧಿಕ ಸಾವನ್ನಪ್ಪಿದ್ದರು ಮತ್ತು ಹಮಾಸ್ ಹೋರಾಟಗಾರರು, 250ಕ್ಕೂ ಅಧಿಕ ಮಂದಿಯನ್ನು ಒತ್ತೆಸೆರೆಯಲ್ಲಿರಿಸಿತ್ತು. ಒತ್ತೆಯಾಳುಗಳ ಬಿಡುಗಡೆಗಾಗಿ ಇಸ್ರೇಲ್ ಗಾಝಾ ಪ್ರದೇಶದ ಮೇಲೆ ಭೀಕರ ಪ್ರತಿದಾಳಿಯನ್ನು ಆರಂಭಿಸಿತ್ತು.