ಟೆಸ್ಲಾ ಲಾಭ ಕುಸಿತ; ಡೋಜ್ ಹೊಣೆಗಾರಿಕೆ ಕಡಿತಗೊಳಿಸಲು ಮಸ್ಕ್ ನಿರ್ಧಾರ

PC: x.com/Independent_ie
ವಾಷಿಂಗ್ಟನ್: ಟೆಸ್ಲಾ ಲಾಭಾಂಶ ಮತ್ತು ವಹಿವಾಟು ಗಣನೀಯವಾಗಿ ಕುಸಿದ ಬೆನ್ನಲ್ಲೇ ಅಮೆರಿಕ ಸರ್ಕಾರದಲ್ಲಿ ತಮ್ಮ ಹೊಣೆಗಾರಿಕೆಯನ್ನು ತೀವ್ರವಾಗಿ ಕಡಿಮೆ ಮಾಡಿಕೊಳ್ಳಲು ಉದ್ಯಮಿ ಎಲಾನ್ ಮಸ್ಕ್ ನಿರ್ಧರಿಸಿದ್ದಾರೆ.
ಟ್ರಂಪ್ ಸರ್ಕಾರ ಹೊಸದಾಗಿ ರಚಿಸಿದ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫೀಶಿಯೆನ್ಸಿ (DOGE) ಮುಖ್ಯಸ್ಥರಾಗಿ ಮಸ್ಕ್ ಕಾರ್ಯ ನಿರ್ವಹಿಸುತ್ತಿದ್ದರು. ಅಮೆರಿಕದ ಸರ್ಕಾರಿ ವೆಚ್ಚ ಮತ್ತು ಉದ್ಯೋಗವನ್ನು ಕಡಿತಗೊಳಿಸುವ ಉದ್ದೇಶದಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ ಈ ಹೊಣೆಗಾರಿಕೆ ವಹಿಸಲಾಗಿತ್ತು.
ಆದರೆ ಮುಂದಿನ ತಿಂಗಳಿನಿಂದ 'ಡೋಜ್'ಗೆ ನೀಡುವ ಸಮಯವು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಟೆಸ್ಲಾ ವ್ಯವಹಾರದಲ್ಲಿ ಮಸ್ಕ್ ಗಮನ ಕಡಿಮೆಯಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ವಾರಕ್ಕೆ ಒಂದರಿಂದ ಎರಡು ದಿನಗಳನ್ನು ಮಾತ್ರ ಡೋಜ್ ಗೆ ಹಂಚಿಕೆ ಮಾಡುವುದಾಗಿ ಅವರು ವಿವರಿಸಿದ್ದಾರೆ. ಅವರ ಈ ರಾಜಕೀಯ ಪಾಲ್ಗೊಳ್ಳುವಿಕೆ ವಿರೋಧಿಸಿ ಟೆಸ್ಲಾ ಕಾರ್ಸ್ ನಲ್ಲಿ ವ್ಯಾಪಕ ಪ್ರತಿಭಟನೆಗಳು ವಿಶ್ವಾದ್ಯಂತ ನಡೆದಿದ್ದವು.
ಮಸ್ಕ್ ನಂತಹ ತಾತ್ಕಾಲಿಕ ಸರ್ಕಾರಿ ಉದ್ಯೋಗಿಗಳ ಕೆಲಸದ ಅವಧಿ ಸಾಮಾನ್ಯವಾಗಿ ವಾರ್ಷಿಕ 130 ದಿನಗಳವರೆಗೆ ಮಾತ್ರ ಇರುತ್ತದೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದ ಎಣಿಕೆ ಮಾಡಿದರೆ ಈ ಕೆಲಸದ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಆದರೆ ಟ್ರಂಪ್ ಅವರ ಮರು ಆಯ್ಕೆಗಾಗಿ 25 ಶತಕೋಟಿ ಡಾಲರ್ ಗಿಂತಲೂ ಅಧಿಕ ಮೊತ್ತವನ್ನು ನೀಡಿದ್ದ ಮಸ್ಕ್ ಸಂಪೂರ್ಣವಾಗಿ ತಮ್ಮ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. "ಅವರನ್ನು ಎಷ್ಟು ಅವಧಿಗೆ ನಾನು ಉಳಿಸಿಕೊಳ್ಳಬಹುದೋ ಅಷ್ಟು ಕಾಲ ಮಸ್ಕ್ ಅವರನ್ನು ಉಳಿಸಿಕೊಳ್ಳುತ್ತೇನೆ" ಎಂದು ಟ್ರಂಪ್ ಈ ತಿಂಗಳ ಆರಂಭದಲ್ಲಿ ಹೇಳಿಕೆ ನೀಡಿದ್ದರು.