ಮ್ಯಾನ್ಮಾರ್: ಚೀನಾ ಗಡಿ ಸನಿಹದ ಪ್ರದೇಶವನ್ನು ವಶಕ್ಕೆ ಪಡೆದ ಬಂಡುಗೋರ ಪಡೆ
ಯಾಂಗಾನ್: ಮ್ಯಾನ್ಮಾರ್ ನ ಶಸ್ತ್ರಸಜ್ಜಿತ ಗುಂಪು ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರಮುಖ ಗಡಿದಾಟು(ಬಾರ್ಡರ್ ಕ್ರಾಸಿಂಗ್)ವನ್ನು ವಶಕ್ಕೆ ಪಡೆದಿದೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ಅಕ್ಟೋಬರ್ ನಲ್ಲಿ ಮೂರು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಸಶಸ್ತ್ರ ಒಕ್ಕೂಟ ಸೇನಾಡಳಿತದ ವಿರುದ್ಧ ಆಕ್ರಮಣವನ್ನು ಪ್ರಾರಂಭಿಸಿದ ನಂತರ, ಉತ್ತರ ಮ್ಯಾನ್ಮಾರ್‍ನಲ್ಲಿ ಚೀನಾದ ಗಡಿಯ ಸನಿಹದ ಶಾನ್ ರಾಜ್ಯಾದ್ಯಂತ ಘರ್ಷಣೆಗಳು ಉಲ್ಬಣಗೊಂಡಿವೆ.
`ಈ ಒಕ್ಕೂಟ ಹತ್ತಕ್ಕೂ ಅಧಿಕ ಸೇನಾನೆಲೆಗಳು ಹಾಗೂ ಚೀನಾದೊಂದಿಗಿನ ವ್ಯಾಪಾರಕ್ಕೆ ಅತೀ ಮುಖ್ಯವಾದ ಪಟ್ಟಣವನ್ನು ವಶಕ್ಕೆ ಪಡೆದಿದೆ. ಮಾಗ್‍ಕೊ ಪ್ರದೇಶದ ಕ್ಯಿನ್ ಸಾನ್ ಕಯಾಟ್ ಗಡಿದಾಟು ಈಗ ಸೇನಾಡಳಿತದ ಕೈತಪ್ಪಿದೆ. ಶುಕ್ರವಾರ ಆರಂಭಗೊಂಡ ಹೋರಾಟದಲ್ಲಿ ಗಡಿಪ್ರದೇಶದ ಇತರ ಕೆಲವು ಪ್ರಮುಖ ಪ್ರದೇಶಗಳೂ ಒಕ್ಕೂಟದ ವಶಕ್ಕೆ ಬಂದಿದೆ' ಎಂದು ಕೊಕಾಂಗ್ ನ್ಯೂಸ್ ರವಿವಾರ ವರದಿ ಮಾಡಿದೆ. ಕ್ಯಿನ್ ಸಾನ್ ಕಯಾಟ್ ಗಡಿದಾಟು ಬಂಡುಗೋರ ಪಡೆ ವಶಕ್ಕೆ ಪಡೆದಿರುವುದನ್ನು ಮ್ಯಾನ್ಮಾರ್‍ನ ಭದ್ರತಾ ಅಧಿಕಾರಿ ದೃಢಪಡಿಸಿರುವುದಾಗು ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಬಳಿಕ 2022ರಲ್ಲಿ ಪುನರಾರಂಭಗೊಂಡ ಕ್ಯಿನ್ ಸಾನ್ ಕಯಾಟ್ ಗಡಿದಾಟು ಮ್ಯಾನ್ಮಾರ್-ಚೀನಾ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾಗಿದೆ. ಇದೀಗ ಈ ಗಡಿದಾಟು ಸೇನಾಡಳಿತದ ಕೈತಪ್ಪಿರುವುದರಿಂದ ಮ್ಯಾನ್ಮಾರ್ ನ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ವರದಿ ಹೇಳಿದೆ.