ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಮಾದರಿ ಜ್ವರ; ಅಧಿಕ ಪ್ರಮಾಣದಲ್ಲಿ ಮಕ್ಕಳು ಬಾಧಿತ
ಬೀಜಿಂಗ್: ಚೀನಾದಲ್ಲಿ ಹಲವಾರು ಮಂದಿಗೆ, ಹೆಚ್ಚಾಗಿ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ ಮಾದರಿಯ ಸಮಸ್ಯೆ ಉಂಟಾಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾದಿಂದ ಈ ಸಂದೇಹಾಸ್ಪದ ಆರೋಗ್ಯ ಸಮಸ್ಯೆಯ ಬಗ್ಗೆ ವರದಿಯನ್ನು ಕೇಳಿದೆ.
ವರದಿಗಳ ಪ್ರಕಾರ ಚೀನಾದ ಆಸ್ಪತ್ರೆಗಳು ಶ್ವಾಸಕೋಶದ ಸೋಂಕು ಸಂಬಂಧಿ ಸಮಸ್ಯೆ ಎದುರಿಸುತಿರುವ ಮಕ್ಕಳಿಂದ ತುಂಬಿ ತುಳುಕುತ್ತಿದೆ. ನವೆಂಬರ್ 12ರಂದು ನ್ಯಾಷನಲ್ ಹೆಲ್ತ್ ಕಮಿಷನ್ ಅಧಿಕಾರಿಗಳು ಚೀನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಗ್ಯ ಸಮಸ್ಯೆಗೆ ದೇಶದಲ್ಲಿ ಕೋವಿಡ್ ನಿರ್ಬಂಧಗಳನ್ನು ಕೈಬಿಟ್ಟರುವುದೇ ಕಾರಣ ಎಂದು ಹೇಳಿದ್ದಾರೆ.
ಪ್ರೋಮೆಡ್ ಎಂಬ ಸಾರ್ವಜನಿಕವಾಗಿ ಲಭ್ಯ ಸರ್ವೇಕ್ಷಣಾ ವ್ಯವಸ್ಥೆಯು ಮಕ್ಕಳಲ್ಲಿ “ಅನ್‌ಡಯಾಗ್ನೋಸ್ಡ್ ನ್ಯುಮೋನಿಯಾ” ಕುರಿತು ಎಚ್ಚರಿಕೆ ನೀಡಿತ್ತು. ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ಆವರಿಸುವ ಮುಂಚಿತವಾಗಿಯೇ ಡಿಸೆಂಬರ್ 2019ರಲ್ಲಿ ಇದೇ ಸಂಸ್ಥೆ SARs-CoV-2 ಬಗ್ಗೆ ಎಚ್ಚರಿಕೆ ನೀಡಿತ್ತು.
ಬೀಜಿಂಗ್ ಮತ್ತು ಲಿಯಾನಿಂಗ್ ನಗರದ ಆಸ್ಪತ್ರೆಗಳಲ್ಲಿ ನ್ಯುಮೋನಿಯಾ ಬಾಧಿತ ಮಕ್ಕಳ ಸಂಖ್ಯೆ ಆಸ್ಪತ್ರೆಗಳಲ್ಲಿ ಅಧಿಕವಾಗಿದೆ. ಎರಡೂ ನಗರಗಳು ಪರಸ್ಪರ 800 ಕಿಮೀ ದೂರವಿವೆ. ಆಸ್ಪತ್ರೆಗಳಲ್ಲಿರುವ ಮಕ್ಕಳಿಗೆ ಕೆಮ್ಮು ಅಥವಾ ಬೇರೆ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ತೀವ್ರ ಜ್ವರ ಮತ್ತು ಪಲ್ಮನರಿ ನೊಡ್ಯೂಲ್‌ಗಳಿವೆ. ಕೆಲ ಶಿಕ್ಷಕರು ಕೂಡ ಈ ಆರೋಗ್ಯ ಸಮಸ್ಯೆಯಿಂದ ಬಾಧಿತರಾಗಿದ್ದು ಕೆಲ ಶಾಲೆಗಳನ್ನು ಮುಚ್ಚಲಾಗಿದೆ.