ನೇಪಾಳದಲ್ಲಿ ಪ್ರಬಲ ಭೂಕಂಪ: 140ಕ್ಕೂ ಅಧಿಕ ಮಂದಿ ಮೃತ್ಯು

Update: 2023-11-04 18:33 GMT

Photo: twitter/ashishsri85

ಕಠ್ಮಂಡು: ನೇಪಾಳದ ವಾಯವ್ಯ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಿಂದ ಕನಿಷ್ಟ 140 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.

ಶುಕ್ರವಾರ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದ್ದು ಕಠ್ಮಂಡುವಿನಿಂದ 142 ಕಿ.ಮೀ, ಹೊಸದಿಲ್ಲಿಯಿಂದ 941 ಕಿ.ಮೀ ದೂರದಲ್ಲಿರುವ ಜಜರ್ಕೋಟ್ನ ಲಮಿದಾಂಡ ನಗರದಲ್ಲಿ ಭೂಕಂಪನದ ಕೇಂದ್ರಬಿಂದುವಿತ್ತು.

6.4 ತೀವ್ರತೆಯ ಭೂಕಂಪದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂವಹನ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಮೃತರ ಪ್ರಮಾಣ ಹೆಚ್ಚಬಹುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ರಾಜಧಾನಿ ಕಠ್ಮಂಡುವಿನ ಈಶಾನ್ಯಕ್ಕೆ ಸರಿಸುಮಾರು 250 ಮೈಲುಗಳಷ್ಟು ದೂರದಲ್ಲಿರುವ ಜಜರ್ಕೋಟ್ನಲ್ಲಿ 11 ಮೈಲುಗಳಷ್ಟು ಆಳದಲ್ಲಿ ಭೂಕಂಪ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಕೇಂದ್ರ ಹಾಗೂ ನೇಪಾಳದ ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ.

ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಾವು-ನೋವು ಸಂಭವಿಸಿದೆ. ಜಜರ್ಕೋಟ್ನಲ್ಲಿ ಕನಿಷ್ಟ 92 ಮಂದಿ ಮೃತಪಟ್ಟಿದ್ದು 55 ಮಂದಿ ಗಾಯಗೊಂಡಿದ್ದಾರೆ. ನೆರೆಯ ರುಕುಮ್ ಜಿಲ್ಲೆಯಲ್ಲಿ 32 ಮಂದಿ ಮೃತಪಟ್ಟಿದ್ದು 85ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಲವು ಮನೆ, ಕಟ್ಟಡಗಳು ನೆಲಸಮಗೊಂಡಿವೆ.

ಭೂಕಂಪದಿಂದಾಗಿ ಹಲವೆಡೆ ಭೂಕುಸಿತವಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಭೂಕಂಪದಿಂದಾಗಿ ಆಗಿರುವ ಅಪಾರ ಪ್ರಾಣಹಾನಿ ಮತ್ತು ನಷ್ಟದಿಂದ ತೀವ್ರ ದುಖವಾಗಿದೆ ಎಂದು ನೇಪಾಳ ಪ್ರಧಾನಿ ಪುಷ್ಪಕಮಲ ದಹಾಲ್ ಟ್ವೀಟ್ ಮಾಡಿದ್ದು ಶೋಧ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ‘ ಭಾರತವು ನೇಪಾಳದ ಜತೆಗಿದೆ ಮತ್ತು ಸಾಧ್ಯವಿರುವ ಎಲ್ಲಾ ಸಹಾಯವನ್ನೂ ನೀಡಲು ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.

ನೇಪಾಳ ಸೇನೆ ಮತ್ತು ಪೊಲೀಸ್ ಸಿಬಂದಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಭಾರತದಲ್ಲೂ ಕಂಪನದ ಅನುಭವ:

ಭೂಕಂಪದ ಪ್ರಭಾವದಿಂದಾಗಿ ಸುಮಾರು 900 ಕಿ.ಮೀ ದೂರದಲ್ಲಿರುವ ಹೊಸದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ಸಿಆರ್), ಭಾರತ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಕತಿಹಾರ್, ಮೋತಿಹಾರ್, ಹಾಗೂ ಬಿಹಾರದ ಹಲವು ಜಿಲ್ಲೆಗಳಲ್ಲೂ ನೆಲ ನಡುಗಿದ ಅನುಭವವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News