ನೇಪಾಳ| ಭಾರೀ ಮಳೆ, ಭೂಕುಸಿತ: ಒಬ್ಬ ಮೃತ್ಯು, ಜನಜೀವನ ಅಸ್ತವ್ಯಸ್ತ
ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ರಸ್ತೆಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.
ಕಠ್ಮಂಡುವಿನ ಬಳಿಯ ಪಟ್ಟಣದಲ್ಲಿ ಭೂಕುಸಿತದಿಂದ ಮನೆಯೊಂದು ಕೊಚ್ಚಿಹೋಗಿದ್ದು ಮನೆಯಲ್ಲಿದ್ದ 6 ಮಂದಿಗಾಗಿ ಹುಡುಕಾಟ ಮುಂದುವರಿದಿದೆ. ನಿರಂತರ ಮಳೆಯಿಂದಾಗಿ ಕಠ್ಮಂಡು ಕಣಿವೆಯ ಬಾಗ್ಮತಿ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ಕಾರಣ ಕಠ್ಮಂಡು ನಗರವನ್ನು ದಕ್ಷಿಣದ ಪ್ರಾಂತಗಳಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಪೂರ್ವದ ಸಿಂಧೂಲಿ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವರ್ಷ ನೇಪಾಳದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಇದುವರೆಗೆ 38 ಮಂದಿ ಮೃತಪಟ್ಟಿದ್ದರೆ 33 ಮಂದಿ ನಾಪತ್ತೆಯಾಗಿದ್ದಾರೆ. ಪರ್ವತ ಪ್ರದೇಶದಲ್ಲಿರುವ ನೇಪಾಳದಲ್ಲಿ ಮಳೆಯ ಜೊತೆಗೆ ಭೂಕುಸಿತವೂ ಸಾಮಾನ್ಯವಾಗಿರುವುದರಿಂದ ಪ್ರತೀ ವರ್ಷ ಹೆಚ್ಚಿನ ಪ್ರಾಣಹಾನಿ ಸಂಭವಿಸುತ್ತದೆ.