ಇಸ್ರೇಲ್- ಫೆಲಸ್ತೀನ್ ಶಾಂತಿಗೆ ನೆತನ್ಯಾಹು ತಡೆಗೋಡೆ: ಸಮೀಕ್ಷೆಯಲ್ಲಿ ಅಮೆರಿಕನ್ನರ ಅಭಿಮತ
ವಾಷಿಂಗ್ಟನ್: ಶ್ವೇತಭವನ ಇತ್ತೀಚೆಗೆ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದದ ಹಿನ್ನೆಲೆಯಲ್ಲಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಗಾಝಾ ಸಂಘರ್ಷವನ್ನು ಧೀರ್ಘಕಾಲ ಬೆಳೆಸುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆಸಿದ ಪ್ರಗತಿ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ, ಇಸ್ರೇಲ್-ಫೆಲಸ್ತೀನ್ ಶಾಂತಿ ಸ್ಥಾಪನೆಗೆ ನೆತನ್ಯಾಹು ತಡೆಯಾಗಿದ್ದಾರೆ ಎಂಬ ಅಭಿಮತವನ್ನು ಬಹುತೇಕ ಮಂದಿ ವ್ಯಕ್ತಪಡಿಸಿದ್ದಾರೆ.
ಜೂನ್ 5 ಮತ್ತು 6ರಂದು ನಡೆದ ಸಮೀಕ್ಷೆಯ ಪ್ರಕಾರ, ಶಾಂತಿಯನ್ನು ಸ್ಥಾಪಿಸಲು ನೆತನ್ಯಾಹು ಪ್ರಮುಖ ಅಥವಾ ಸಾಮಾನ್ಯ ತಡೆಯಾಗಿ ಪರಿಣಮಿಸಿದ್ದಾರೆ ಎಂದು ಶೇಕಡ 49ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಅವರು ತಡೆಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವವರು ಕೇವಲ ಶೇಕಡ 18ರಷ್ಟು ಮಂದಿ ಮಾತ್ರ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಕದನ ವಿರಾಮ ಸಾಧಿಸಲು ಸಾಧ್ಯವಾಗದಿರುವ ಪ್ರಾಥಮಿಕ ಹೊಣೆಗಾರಿಕೆ ಬಗ್ಗೆ ಪ್ರಶ್ನಿಸಿದಾಗ, ಸಮೀಕ್ಷೆಗೆ ಒಳಪಡಿಸಿದ ಶೇಕಡ 38ರಷ್ಟು ಮಂದಿ ನೆತನ್ಯಾಹು ಹಾಗೂ ಹಮಾಸ್ ಸಮಾನ ಹೊಣೆಯನ್ನು ಹೊಂದಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಹಮಾಸ್ ಮಾತ್ರ ಇದಕ್ಕೆ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವರಿಗಿಂತ ಶೇಕಡ 19ರಷ್ಟು ಅಧಿಕ ಮಂದಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
ಬೈಡನ್ ಮುಂದಿಟ್ಟಿರುವ ಮೂರು ಹಂತದ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಜನತೆಯ ಅಭಿಪ್ರಾಯವನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಗಿತ್ತು. ಶೇಕಡ 64 ಮಂದಿ ಈ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.