ರಫಾದ ಮೇಲಿನ ದಾಳಿ ದುರಂತ ದುರ್ಘಟನೆ, ಆದರೆ ಗುರಿ ಸಾಧಿಸುವವರೆಗೆ ಯುದ್ಧ ಮುಂದುವರಿಕೆ: ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2024-05-28 15:46 GMT

 ಬೆಂಜಮಿನ್ ನೆತನ್ಯಾಹು | PC : PTI

ಟೆಲ್‍ಅವೀವ್: ರಫಾದಲ್ಲಿ ಹಲವು ಫೆಲೆಸ್ತೀನೀಯರ ಸಾವುನೋವಿಗೆ ಕಾರಣವಾದ ರವಿವಾರದ ಮಾರಣಾಂತಿಕ ದಾಳಿಯ ಬಗ್ಗೆ ಅಂತರಾಷ್ಟ್ರೀಯ ಖಂಡನೆ ಹೆಚ್ಚುತ್ತಿರುವಂತೆಯೇ ಈ ದಾಳಿ ದುರಂತ ದುರ್ಘಟನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.

ರವಿವಾರ ಪಶ್ಚಿಮ ರಫಾದಲ್ಲಿ ಸ್ಥಳಾಂತರಿತ ಫೆಲೆಸ್ತೀನೀಯರು ನೆಲೆಸಿದ್ದ ಶಿಬಿರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಟ 45 ಜನರು ಹತರಾಗಿದ್ದು ನೂರಕ್ಕೂ ಅಧಿಕ ಜನರು ತೀವ್ರವಾದ ಸುಟ್ಟ ಗಾಯ, ಮೂಳೆ ಮುರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ದಾಳಿಯ ಬಗ್ಗೆ ಇಸ್ರೇಲ್ ಸಂಸತ್‍ನಲ್ಲಿ ಹೇಳಿಕೆ ನೀಡಿದ ನೆತನ್ಯಾಹು `ಗಾಝಾದಲ್ಲಿ ಹೋರಾಟದ ನಡುವೆ ಸಿಕ್ಕಿಬಿದ್ದಿರುವ ನಾಗರಿಕರ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಇಸ್ರೇಲ್ ಕೈಗೊಂಡಿದೆ' ಎಂದರು.

ಸಂಘರ್ಷದಲ್ಲಿ ಶಾಮೀಲಾಗದರಿಗೆ ಯಾವುದೇ ಹಾನಿಯಾಗದಂತೆ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಗರಿಷ್ಟ ಪ್ರಯತ್ನ ಮಾಡಿದೆ. ಆದರೆ ನಮ್ಮ ಗುರಿ ಸಾಧಿಸುವವರೆಗೆ ಹಮಾಸ್ ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದರು. ರಫಾದಲ್ಲಿ ನಾವು ಈಗಾಗಲೇ ಸುಮಾರು 10 ಲಕ್ಷದಷ್ಟು ನಾಗರಿಕರನ್ನು ಸ್ಥಳಾಂತರಿಸಿದ್ದೇವೆ. ಸಂಘರ್ಷದಲ್ಲಿ ಭಾಗಿಯಾಗದವರಿಗೆ ಹಾನಿಯಾಗದಂತೆ ಗರಿಷ್ಟ ಪ್ರಯತ್ನದ ಹೊರತಾಗಿಯೂ ದುರದೃಷ್ಟವಶಾತ್ ದುರಂತ ಪ್ರಮಾದ ಸಂಭವಿಸಿದೆ. ಈ ಪ್ರಕರಣವನ್ನು ನಾವು ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಇದು ನಮ್ಮ ಕಾರ್ಯನೀತಿಯಾಗಿದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ರಫಾ ಮೇಲಿನ ದಾಳಿಯನ್ನು ಜಾಗತಿಕ ಮುಖಂಡರು ಖಂಡಿಸಿದ್ದಾರೆ. ರವಿವಾರದ ದಾಳಿ ಭಯಾನಕವಾಗಿದೆ ಎಂದು ಖಂಡಿಸಿರುವ ಯುರೋಪಿಯನ್ ಯೂನಿಯನ್‍ನ ಅಧಿಕಾರಿ ಜೋಸೆಫ್ ಬೊರೆಲ್ ರಫಾದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಕಳೆದ ವಾರ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನೀಡಿದ್ದ ಆದೇಶವನ್ನು ಇಸ್ರೇಲ್ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಹಲವಾರು ನಾಗರಿಕರ ಸಾವುನೋವಿಗೆ ಕಾರಣವಾಗಿರುವ ಯುದ್ಧವಿಧಾನ ಮತ್ತು ತಂತ್ರಗಳಲ್ಲಿ ಇಸ್ರೇಲ್ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂಬುದನ್ನು ರವಿವಾರದ ದಾಳಿ ಸ್ಪಷ್ಟಪಡಿಸಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಖಂಡಿಸಿದ್ದಾರೆ.

ರವಿವಾರ ನಡೆಸಿದ ದಾಳಿಯಲ್ಲಿ ಹಮಾಸ್‍ನ ಇಬ್ಬರು ಹಿರಿಯ ಕಮಾಂಡರ್ ಗಳು ಹತರಾಗಿದ್ದು ಈ ಪ್ರದೇಶದಲ್ಲಿ ನಾಗರಿಕರ ಸಾವುನೋವಿನ ವರದಿಯ ಬಗ್ಗೆ ತನಿಖೆ ನಡೆಸುವುದಾಗಿ ಇಸ್ರೇಲ್ ಭದ್ರತಾ ಪಡೆ ಹೇಳಿದೆ. ಆದರೆ ರಫಾದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿಯ ಬಳಿಯ ತಲ್ ಅಸ್‍ಸುಲ್ತಾನ್ ಪ್ರದೇಶದಲ್ಲಿ ಸ್ಥಳಾಂತರಿತ ಫೆಲೆಸ್ತೀನೀಯರು ನೆಲೆಸಿದ್ದ ಟೆಂಟ್‍ಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ರೆಡ್‍ಕ್ರೆಸೆಂಟ್ ಹೇಳಿದೆ. ಹಮಾಸ್ ನೆಲೆಯ ಮೇಲೆ ನಿಖರ ದಾಳಿ ನಡೆದಿದೆ ಎಂಬ ಇಸ್ರೇಲ್‍ನ ಹೇಳಿಕೆಯನ್ನು ತಿರಸ್ಕರಿಸಿರುವ `ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್'(ಮಾನವೀಯ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆ) ` ರಫಾದಲ್ಲಿ ಸುರಕ್ಷಿತ ವಲಯ ಎಂದು ಕರೆಯಲ್ಪಡುವ ಜನಸಾಂದ್ರತೆಯ ಶಿಬಿರಗಳ ಮೇಲಿನ ದಾಳಿಯು ಗಾಝಾದ ನಾಗರಿಕರ ಜೀವನದ ಕುರಿತ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ' ಎಂದು ಖಂಡಿಸಿದೆ.

ಇಸ್ರೇಲ್‍ಗೆ ಸ್ವರಕ್ಷಣೆಯ ಹಕ್ಕು ಇದೆ ಎಂದ ಅಮೆರಿಕ:

ರಫಾದ ಮೇಲಿನ ದಾಳಿಯ ಬಳಿಕ ಪ್ರಕಟವಾಗಿರುವ ಫೋಟೋಗಳು, ವೀಡಿಯೊಗಳು ಹೃದಯ ವಿದ್ರಾವಕವಾಗಿದೆ. ಆದರೆ ಇಸ್ರೇಲ್‍ಗೆ ಸ್ವರಕ್ಷಣೆಯ ಹಕ್ಕು ಇದೆ ಎಂದು ಅಮೆರಿಕ ಹೇಳಿದೆ. ಹಮಾಸ್ ವಿರುದ್ಧ ಪ್ರತೀಕಾರ ನಡೆಸುವ ಹಕ್ಕು ಇಸ್ರೇಲ್‍ಗೆ ಇದೆ ಮತ್ತು ಇಸ್ರೇಲ್ ಪ್ರಜೆಗಳ ವಿರುದ್ಧದ ದಾಳಿಗೆ ಹೊಣೆಯಾದ ಹಮಾಸ್‍ನ ಇಬ್ಬರು ಉನ್ನತ ಮುಖಂಡರು ಈ ದಾಳಿಯಲ್ಲಿ ಹತರಾಗಿರುವ ಮಾಹಿತಿಯಿದೆ. ಆದರೆ ನಾಗರಿಕರ ಸುರಕ್ಷತೆಗೆ ಇಸ್ರೇಲ್ ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News