ಪಾಕ್ ಮುಖ್ಯ ನ್ಯಾಯಾಧೀಶರು ಪಕ್ಷಪಾತಿ: ಇಮ್ರಾನ್ ಖಾನ್ ಆರೋಪ

Update: 2024-05-04 17:22 GMT

ಲಾಹೋರ್: ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ(ಸಿಜೆಪಿ) ಖಾಜಿ ಫಯಾಝ್ ಇಸಾ ಅವರು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ವಿರುದ್ಧ ಪಕ್ಷಪಾತ ತೋರುತ್ತಿದ್ದಾರೆ ಎಂದು ಪಿಟಿಐ ಸ್ಥಾಪಕ, ಮಾಜಿ ಪ್ರಧಾನಿ ಇಮ್ರಾನ್‍ ಖಾನ್ ಆರೋಪಿಸಿದ್ದಾರೆ.

ತನ್ನ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ತಂತ್ರ ಅನುಸರಿಸಲಾಗುತ್ತಿದೆ. ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ ಎಲ್ಲಾ ನ್ಯಾಯಾಧೀಶರನ್ನೂ ಆಗ್ರಹಿಸುವುದಾಗಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಇಮ್ರಾನ್‍ಖಾನ್ ಹೇಳಿಕೆ ನೀಡಿದ್ದಾರೆ. ಇಮ್ರಾನ್ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ತೋಷಖಾನಾ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

ತನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಸಿಜೆಪಿ ಇಸಾ ಹೇಳಿದ್ದಾರೆ. ಆದರೆ ತಪ್ಪು ಮಾಡಲು ನಿರಾಕರಿಸುವವರ ಮೇಲೆ ಒತ್ತಡ ಹೇರಲಾಗುತ್ತದೆ. ನೀವು ಸರಕಾರದ ಬಿ ತಂಡದಂತೆ ವರ್ತಿಸುವ ಕಾರಣ ನಿಮ್ಮ ಮೇಲೆ ಒತ್ತಡವಿರಲು ಸಾಧ್ಯವಿಲ್ಲ. ನೀವು ಪಿಟಿಐನಿಂದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಂಡಿದ್ದೀರಿ. ಚುನಾವಣೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಗೆ ಅವಕಾಶ ನಿರಾಕರಿಸಿದ್ದೀರಿ. ಮೇ 9ರ ಘಟನೆ(ಸೇನೆಯ ಕೇಂದ್ರ ಕಚೇರಿ ಮೇಲೆ ಪಿಟಿಐ ಕಾರ್ಯಕರ್ತರ ದಾಳಿ ಆರೋಪ)ಯ ನೆಪದಲ್ಲಿ ನಮ್ಮ ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಿದ್ದೀರಿ. ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಚಾರಣೆ ಕೋರಿ ನಾವು ಸಲ್ಲಿಸಿರುವ ಅರ್ಜಿಯನ್ನು ಇದುವರೆಗೂ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಮಹಿಳಾ ಮೀಸಲು ಸ್ಥಾನಗಳ ಬಗ್ಗೆ ಸಲ್ಲಿಸಿದ್ದ ಅರ್ಜಿಯೂ ಬಾಕಿಯಾಗಿದೆ. ಬೆದರಿಕೆಗಳ ಮೂಲಕ ಬಲವಂತವಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಕೆಡವುತ್ತಿದೆ ಎಂದು ಇಮ್ರಾನ್ ಹೇಳಿಕೆಯನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.

ಇಮ್ರಾನ್‍ಖಾನ್ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿದ್ದರೆ ಅವರು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಆಗುತ್ತಿದ್ದರು ಎಂದು ಪಿಟಿಐನ ಮಾಜಿ ನಾಯಕ ಫವಾದ್ ಚೌಧರಿ ಇತ್ತೀಚೆಗೆ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News