ವಿಶ್ವಸಂಸ್ಥೆಯಲ್ಲಿನ ಭಾಷಣದಲ್ಲಿ ಕಾಶ್ಮೀರ ವಿಷಯ ಉಲ್ಲೇಖಿಸದ ಟರ್ಕಿ ಅಧ್ಯಕ್ಷ

Update: 2024-09-27 16:54 GMT

  ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್, ಟರ್ಕಿ ಅಧ್ಯಕ್ಷ ಎರ್ಡೋಗನ್PC :X/CMShehbaz

ವಿಶ್ವಸಂಸ್ಥೆ : ಕಳೆದ ಐದು ವರ್ಷದಲ್ಲಿ ಪ್ರತೀ ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಕಾಶ್ಮೀರದ ವಿಷಯವನ್ನು ಉಲ್ಲೇಖಿಸುತ್ತಾ ಬಂದಿದ್ದ ಟರ್ಕಿ ಅಧ್ಯಕ್ಷ ಎರ್ಡೋಗನ್ ಈ ಬಾರಿ ಗಾಝಾದಲ್ಲಿ ಫೆಲೆಸ್ತೀನೀಯರ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿ ಕಾಶ್ಮೀರ ವಿಷಯದ ಬಗ್ಗೆ ಸೊಲ್ಲೆತ್ತಲಿಲ್ಲ ಎಂದು ವರದಿಯಾಗಿದೆ.

ಟರ್ಕಿ ಅಧ್ಯಕ್ಷರ ಈ ನಡೆ ಕಾರ್ಯನೀತಿಯಲ್ಲಿನ ದೊಡ್ಡ ಬದಲಾವಣೆಯನ್ನು ಸೂಚಿಸಿದ್ದು ಭಾರತಕ್ಕೆ ದೊರೆತ ರಾಜತಾಂತ್ರಿಕ ಗೆಲುವು ಎಂದು ವಿಶ್ಲೇಷಿಸಲಾಗಿದ್ದು, ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಭಾರತ 2019ರಲ್ಲಿ ರದ್ದುಗೊಳಿಸಿದ ಬಳಿಕ ಪ್ರತೀ ವರ್ಷ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ಟರ್ಕಿ ಅಧ್ಯಕ್ಷ ಎರ್ಡೋಗನ್ , ಕಾಶ್ಮೀರ ವಿಷಯದಲ್ಲಿ ಭಾರತ- ಪಾಕಿಸ್ತಾನದ ನಡುವೆ ಮಾತುಕತೆಗೆ ಸಲಹೆ ನೀಡುತ್ತಿದ್ದರು. ಆದರೆ ಈ ಬಾರಿ ಗಾಝಾದಲ್ಲಿ ಫೆಲೆಸ್ತೀನೀಯರು ಪಡುತ್ತಿರುವ ಬವಣೆಯ ಬಗ್ಗೆ ತಮ್ಮ ಮಾತನ್ನು ಕೇಂದ್ರೀಕರಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಝ್ ಝಹ್ರಾ ` ಒಂದು ಹೇಳಿಕೆಯಿಂದ ಯಾವುದೇ ಅನಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು' ಎಂದಿದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸುವಾಗ ಪಾಕಿಸ್ತಾನದ ಪರ ನಿಂತಿದ್ದ ಟರ್ಕಿ ಅಧ್ಯಕ್ಷರು ಈ ಬಾರಿ ತಮ್ಮ ಕಾರ್ಯನೀತಿಯಲ್ಲಿ ಬದಲಾವಣೆ ತಂದಿರುವುದು ಸ್ಪಷ್ಟವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾಜಿ ರಾಯಭಾರಿ ಮಲೀಹಾ ಲೋಧಿ ಪ್ರತಿಪಾದಿಸಿದ್ದಾರೆ.

ಭಾರತದ ಜತೆಗಿನ ಸಂಬಂಧ ಸುಧಾರಿಸಲು ಟರ್ಕಿ ಆಸಕ್ತಿ ಹೊಂದಿದ್ದು ತನ್ನ ಜಾಗತಿಕ ಮೈತ್ರಿಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಬ್ರಿಕ್ಸ್ ವೇದಿಕೆಯ ಸದಸ್ಯತ್ವ ಪಡೆಯಲು ಎರ್ಡೋಗನ್ ಆಸಕ್ತಿ ತೋರಿದ್ದಾರೆ. ಟರ್ಕಿ ಸರಕಾರವು ತನ್ನ ಸಾಂಪ್ರದಾಯಿಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳನ್ನು ಮೀರಿ ಸಂಬಂಧಗಳನ್ನು ರೂಪಿಸಲು ಉತ್ಸುಕವಾಗಿದೆ. ವಿಶ್ವಸಂಸ್ಥೆಯಲ್ಲಿ ಎರ್ಡೋಗನ್ ಮಾಡಿದ ಭಾಷಣದಲ್ಲಿನ ಬದಲಾವಣೆಯು ಈ ಮಹಾತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸಬಹುದು ಎಂದು ವಿಶ್ಲೇಷಿಸಲಾಗಿದೆ.

ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಎರ್ಡೋಗನ್ ಜತೆ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ನಡೆಸಿದ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಕ್ಕೆ ಬರಲಿಲ್ಲ. ಅದರ ಬದಲು ಗಾಝಾದಂತಹ ಪ್ರಾದೇಶಿಕ ವಿಷಯಗಳನ್ನು ಕೇಂದ್ರೀಕರಿಸಿ ಮಾತುಕತೆ ನಡೆಸಿರುವುದಾಗಿ ಪಾಕ್ ಪ್ರಧಾನಿಯವರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News