ಪನ್ನೂನ್ ಹತ್ಯೆ ಸಂಚಿನಲ್ಲಿ ತನ್ನ ಪಾತ್ರವಿಲ್ಲ: ನಿಖಿಲ್ ಗುಪ್ತಾ
Update: 2024-06-18 17:01 GMT
ನ್ಯೂಯಾರ್ಕ್: ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಅಮೆರಿಕದಲ್ಲಿ ಪಿತೂರಿ ಹೂಡಿರುವ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ಪನ್ನೂನ್ ಹತ್ಯೆಯ ಸಂಚನ್ನು ನ್ಯೂಯಾರ್ಕ್ ಪೊಲೀಸರು ವಿಫಲಗೊಳಿಸಿರುವುದಾಗಿ ಹೇಳಿದ ಬೆನ್ನಲ್ಲೇ ಪಿತೂರಿಯಲ್ಲಿ ಶಾಮೀಲಾಗಿರುವ ಆರೋಪಿಯೆಂದು ಹೆಸರಿಸಲಾದ ನಿಖಿಲ್ ಗುಪ್ತಾ ಝೆಕ್ ಗಣರಾಜ್ಯಕ್ಕೆ ಪರಾರಿಯಾಗಿದ್ದ. ಆದರೆ ಕಳೆದ ವರ್ಷದ ಜೂನ್‍ನಲ್ಲಿ ಅಲ್ಲಿ ಬಂಧಿತನಾಗಿದ್ದ. ವಿಚಾರಣೆಗಾಗಿ ಈತನನ್ನು ಝೆಕ್ ಗಣರಾಜ್ಯದ ಅಧಿಕಾರಿಗಳು ಅಮೆರಿಕಕ್ಕೆ ಹಸ್ತಾಂತರಿಸಿದ್ದರು. ಗುಪ್ತಾನನ್ನು ಸೋಮವಾರ ಫೆಡರಲ್ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ತಾನು ನಿರಪರಾಧಿಯಾಗಿದ್ದು ಅನ್ಯಾಯವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತನ್ನ ವಕೀಲರ ಮೂಲಕ ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.