ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ನೆರವಾಗಲು ಯೋಧರ ರವಾನಿಸಲಿರುವ ಉತ್ತರ ಕೊರಿಯಾ; ವರದಿ

Update: 2024-10-18 15:04 GMT

PC: X 

ಸಿಯೋಲ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ನೆರವಾಗಲು ಉತ್ತರ ಕೊರಿಯಾ ದೊಡ್ಡ ಪ್ರಮಾಣದ ಪಡೆಗಳನ್ನು ಕಳುಹಿಸಲು ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ʼಯೊನ್ಹಾಪ್ʼ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.

ವಿಶೇಷ ಪಡೆ ಸೇರಿದಂತೆ 12,000 ಯೋಧರ ನಾಲ್ಕು ಬ್ರಿಗೇಡ್‍ಗಳನ್ನು ರಶ್ಯಕ್ಕೆ ಕಳುಹಿಸಲು ಉತ್ತರ ಸರಕಾರ ನಿರ್ಧರಿಸಿರುವ ಬಗ್ಗೆ ಮಾಹಿತಿಯಿದೆ. ತುಕಡಿಗಳನ್ನು ರವಾನಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ವರದಿ ತಿಳಿಸಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ನೆರವಾಗಲು ಉತ್ತರ ಕೊರಿಯಾ 10,000 ಯೋಧರಿಗೆ ತರಬೇತಿ ನೀಡುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಗುರುವಾರ ಹೇಳಿದ್ದರು. ನೇಟೊ ರಕ್ಷಣಾ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು "ಯುದ್ಧದಲ್ಲಿ ತನಗಾದ ಭಾರೀ ಹಾನಿಯನ್ನು ಸರಿದೂಗಿಸಲು, ಮತ್ತು ಯುವ ರಶ್ಯನ್ನರು ಸೇನೆಗೆ ಸೇರಲು ಹಿಂದೇಟು ಹಾಕುತ್ತಿರುವುದರಿಂದ ಉತ್ತರ ಕೊರಿಯಾದ ಪಡೆಯನ್ನು ರಶ್ಯ ಅವಲಂಬಿಸಿದೆ" ಎಂದವರು ಹೇಳಿದ್ದಾರೆ.

ಈ ಮಧ್ಯೆ, ಶುಕ್ರವಾರ ಭದ್ರತಾ ಅಧಿಕಾರಿಗಳ ತುರ್ತು ಸಭೆ ನಡೆಸಿದ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ `ರಶ್ಯ ಮತ್ತು ಉತ್ತರ ಕೊರಿಯಾ ನಡುವಿನ ನಿಕಟ ಮಿಲಿಟರಿ ಸಂಬಂಧವು ಶಸ್ತ್ರಾಸ್ತ್ರ ವರ್ಗಾವಣೆಯನ್ನು ಮೀರಿ ತುಕಡಿ ನಿಯೋಜನೆಯ ಹಂತಕ್ಕೆ ಮುಂದುವರಿದಿದೆ. ಈ ಬೆಳವಣಿಗೆಯು ನಮ್ಮ ದೇಶಕ್ಕಷ್ಟೇ ಅಲ್ಲ, ಅಂತರಾಷ್ಟ್ರೀಯ ಸಮುದಾಯಕ್ಕೂ ಗಮನಾರ್ಹವಾದ ಮಿಲಿಟರಿ ಬೆದರಿಕೆಯನ್ನು ಒಡ್ಡುತ್ತದೆ' ಎಂದು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News