ಉತ್ತರ ಕೊರಿಯಾ: ಹೈಪರ್‍ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಪ್ಯೋಂಗ್ಯಾಂಗ್: ಉತ್ತರ ಕೊರಿಯಾ ಹೊಸ ಮಧ್ಯಂತರ ಶ್ರೇಣಿಯ ಹೈಪರ್‍ಸಾನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾ ಉಡಾವಣೆಯನ್ನು ನಡೆಸಿದೆ ಮತ್ತು ಪರಮಾಣು ಮತ್ತು ಕ್ಷಿಪಣಿ ಸಾಮಥ್ರ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸಿದೆ ಎಂದು ಸರಕಾರಿ ಸ್ವಾಮ್ಯದ ಕೆಸಿಎನ್‍ಎ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಪ್ಯೋಂಗ್ಯಾಂಗ್‍ನ ಹೊರವಲಯದಲ್ಲಿ ಸೋಮವಾರ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ. 100 ಕಿ.ಮೀ ಎತ್ತರದಲ್ಲಿ ಶಬ್ದದ ವೇಗಕ್ಕಿಂತ 12 ಪಟ್ಟು ವೇಗದಲ್ಲಿ ಸುಮಾರು 1,500 ಕಿ.ಮೀ ಚಲಿಸಿದ್ದು ಅಲ್ಲಿಂದ ಎರಡನೇ ಹಂತದಲ್ಲಿ 42.5 ಕಿ.ಮೀಯಷ್ಟು ಕೆಳಗಿಳಿದು ದೇಶದ ಪೂರ್ವ ಕರಾವಳಿಯ ಸಮುದ್ರದಲ್ಲಿ ನಿಗದಿಗೊಳಿಸಿದ್ದ ಗುರಿಯನ್ನು ಹೊಡೆದಿದೆ ಎಂದು ವರದಿ ಹೇಳಿದೆ.
ಕ್ಷಿಪಣಿಯ ಇಂಜಿನ್ ವಿಭಾಗದಲ್ಲಿ ಹೊಸ ಕಾರ್ಬನ್ ಫೈಬರ್ ವಸ್ತುಗಳನ್ನು ಬಳಸಲಾಗಿದ್ದು ಇದು ಯಾವುದೇ ಸದೃಢ ರಕ್ಷಣಾ ತಡೆಗೋಡೆಯನ್ನು ಪರಿಣಾಮಕಾರಿಯಾಗಿ ಭೇದಿಸುತ್ತದೆ ಮತ್ತು ಎದುರಾಳಿಯ ಮೇಲೆ ಗಂಭೀರ ಪ್ರಹಾರ ನೀಡುತ್ತದೆ ಉತ್ತರ ಕೊರಿಯಾ ಹೇಳಿದೆ. ಆದರೆ ಇದು ಉತ್ಪ್ರೇಕ್ಷಿತ ವರದಿಯಾಗಿದೆ. ಕ್ಷಿಪಣಿ 1,100 ಕಿ.ಮೀ ಚಲಿಸಿದೆ ಮತ್ತು ಎರಡನೇ ಹಂತದಲ್ಲಿ ಎತ್ತರವನ್ನು ಕೆಳಗಿಳಿಸಿದ ಪ್ರಕ್ರಿಯೆಯನ್ನು ಗಮನಿಸಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ.