ಬ್ಲಿಂಕನ್ ಸಿಯೋಲ್ ಗೆ ಭೇಟಿ ಸಂದರ್ಭದಲ್ಲೇ ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ
ಸಿಯೋಲ್: ಸೋಮವಾರ ತಾನು ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ನಡೆಸಿರುವುದು ದಕ್ಷಿಣ ಕೊರಿಯಾ ಮತ್ತು ಜಪಾನ್ಗಳು ಅಮೆರಿಕದ ಜತೆಗಿನ ಸಹಕಾರ ಸಂಬಂಧವನ್ನು ಬಲಪಡಿಸುವ ಅಗತ್ಯವನ್ನು ನೆನಪಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಥೋನಿ ಬ್ಲಿಂಕನ್ ಹೇಳಿದ್ದಾರೆ.
ಉತ್ತರ ಕೊರಿಯಾವು ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ನಡೆಸಿರುವ ಸಾಧ್ಯತೆಯಿದ್ದು ಕ್ಷಿಪಣಿಯು 1,100 ಕಿ.ಮೀಗೂ ದೂರ ಪೂರ್ವಕ್ಕೆ ಚಲಿಸಿ ಸಮುದ್ರಕ್ಕೆ ಪತನಗೊಂಡಿದೆ ಎಂದು ದಕ್ಷಿಣ ಕೊರಿಯಾ ಮಿಲಿಟರಿ ಹೇಳಿದೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕನ್ ` ಕ್ಷಿಪಣಿ ಉಡಾವಣೆಯು ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ನಡುವಿನ ಸಹಯೋಗದ ಪ್ರಾಮುಖ್ಯತೆ, ಕ್ಷಿಪಣಿ ಡೇಟಾವನ್ನು ಹಂಚಿಕೊಳ್ಳುವ, ತ್ರಿಪಕ್ಷೀಯ ಮಿಲಿಟರಿ ಸಮರಾಭ್ಯಾಸದ ಅಗತ್ಯವನ್ನು ಒತ್ತಿಹೇಳಿದೆ' ಎಂದರು. ಇದೇ ಸಂದರ್ಭ ಉತ್ತರ ಕೊರಿಯಾ ಮತ್ತು ರಶ್ಯದ ನಡುವಿನ ಸಂಬಂಧ ಗಾಢವಾಗುತ್ತಿರುವುದನ್ನು ಉಲ್ಲೇಖಿಸಿದ ಬ್ಲಿಂಕನ್ `ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯದ ಪರ ಹೋರಾಡಲು ಉತ್ತರ ಕೊರಿಯಾ ತನ್ನ ಸೈನಿಕರನ್ನು ರವಾನಿಸಿರುವುದಕ್ಕೆ ಪ್ರತಿಯಾಗಿ ರಶ್ಯವು ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನವನ್ನು ಉತ್ತರ ಕೊರಿಯಾದ ಜತೆ ಹಂಚಿಕೊಳ್ಳಲಿದೆ ಎಂಬ ವರದಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.