ರಶ್ಯದ ಸ್ನೇಹಿಯಲ್ಲದ ದೇಶಗಳ ಪಟ್ಟಿಗೆ ನಾರ್ವೆ ಸೇರ್ಪಡೆ
ಮಾಸ್ಕೊ: ರಶ್ಯದ ರಾಜತಾಂತ್ರಿಕ ನಿಯೋಗದ ಕಾರ್ಯಾಚರಣೆಗಳ ವಿರುದ್ಧ `ಸ್ನೇಹಪರವಲ್ಲದ ಕೃತ್ಯ' ನಡೆಸುವ ವಿದೇಶಿ ದೇಶಗಳ ಪಟ್ಟಿಗೆ ನಾರ್ವೆಯನ್ನು ಸೇರ್ಪಡೆಗೊಳಿಸಿರುವುದಾಗಿ ರಶ್ಯದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಆರ್‍ಐಎ ನೊವೋಸ್ತಿ ಗುರುವಾರ ವರದಿ ಮಾಡಿದೆ.
ಈ ಪಟ್ಟಿಯಲ್ಲಿರುವ ದೇಶಗಳು ರಶ್ಯದಲ್ಲಿ ನೇಮಕ ಮಾಡಿಕೊಳ್ಳುವ ಸ್ಥಳೀಯ ಸಿಬಂದಿಗಳ ಮೇಲೆ ಮಿತಿ ವಿಧಿಸಲಾಗುತ್ತದೆ. ನಾರ್ವೆಗೆ 27 ಸ್ಥಳೀಯ ಸಿಬಂದಿಗಳನ್ನು ಮಾತ್ರ ನೇಮಿಸಲು ಅವಕಾಶ ನೀಡಲಾಗುವುದು ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಬೇಹುಗಾರಿಕೆ ಆರೋಪದಲ್ಲಿ ಕಳೆದ ಎಪ್ರಿಲ್‍ನಲ್ಲಿ ನಾರ್ವೆ 15 ರಶ್ಯನ್ ರಾಜತಾಂತ್ರಿಕರನ್ನು ಉಚ್ಛಾಟಿಸಿತ್ತು. ಇದಕ್ಕೆ ಪ್ರತಿಯಾಗಿ ರಶ್ಯವು ನಾರ್ವೆಯ 10 ರಾಜತಾಂತ್ರಿಕರನ್ನು ಉಚ್ಛಾಟಿಸಿದೆ. `ಗಡಿಯನ್ನು ಹಂಚಿಕೊಂಡಿರುವ ರಶ್ಯದೊಂದಿಗೆ ಸ್ನೇಹಪರವಲ್ಲದ ರೀತಿಯಲ್ಲಿ ನಾವು ವರ್ತಿಸಲು ಕಾರಣಗಳೇ ಇಲ್ಲ. ಈಗಿನ ಪರಿಸ್ಥಿತಿಗೆ ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧ ಕಾರಣವಾಗಿದ್ದು ಈ ಯುದ್ಧವನ್ನು ಅಂತ್ಯಗೊಳಿಸುವ ಆಯ್ಕೆಯನ್ನು ಸ್ವತಃ ರಶ್ಯವೇ ಮಾಡಬೇಕಾಗಿದೆ' ಎಂದು ನಾರ್ವೆಯ ವಿದೇಶಾಂಗ ಸಚಿವ ಅನ್ನಿಕೆನ್ ಹ್ಯುಟ್‍ಫೆಲ್ಡ್ ಹೇಳಿದ್ದಾರೆ.