ಪಹಲ್ಗಾಮ್ ದಾಳಿ | ಜವಾಬ್ದಾರಿಯುತ ರೀತಿಯ ಪರಿಹಾರ ಕ್ರಮ: ಭಾರತ, ಪಾಕಿಸ್ತಾನಕ್ಕೆ ಅಮೆರಿಕ ಒತ್ತಾಯ

ಸಾಂದರ್ಭಿಕ ಚಿತ್ರ | PC : PTI
ವಾಷಿಂಗ್ಟನ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಅಮೆರಿಕ ಹೇಳಿದ್ದು ಜವಾಬ್ದಾರಿಯುತ ಪರಿಹಾರ ಕಂಡುಕೊಳ್ಳಲು ಕಾರ್ಯ ನಿರ್ವಹಿಸುವಂತೆ ಉಭಯ ದೇಶಗಳನ್ನು ಆಗ್ರಹಿಸಿದೆ.
ದಾಳಿಯ ಬಳಿಕ ಅಮೆರಿಕವು ಭಾರತಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದರೂ ಪಾಕಿಸ್ತಾನವನ್ನು ಟೀಕಿಸಿಲ್ಲ. ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಆರೋಪಿಸಿದ್ದು ಇದನ್ನು ಪಾಕಿಸ್ತಾನ ನಿರಾಕರಿಸಿದ್ದು ತಟಸ್ಥ ತನಿಖೆಗೆ ಒತ್ತಾಯಿಸಿದೆ. `ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ನಾವು ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಹಲವು ಹಂತಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಸರಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಜವಾಬ್ದಾರಿಯುತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಎಲ್ಲಾ ಪಕ್ಷಗಳನ್ನೂ ನಾವು ಒತ್ತಾಯಿಸುತ್ತಿದ್ದೇವೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಅಮೆರಿಕವು ಭಾರತದೊಂದಿಗೆ ನಿಲ್ಲುತ್ತದೆ ಮತ್ತು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪುನರುಚ್ಚರಿಸಿದೆ.