ಪಹಲ್ಗಾಮ್ ದಾಳಿ ಘಟನೆ: ರಶ್ಯ, ಚೀನಾ ಸೇರಿದಂತೆ ಅಂತರಾಷ್ಟ್ರೀಯ ತನಿಖಾ ತಂಡ ರಚನೆಗೆ ಪಾಕ್ ಆಗ್ರಹ
Update: 2025-04-27 23:40 IST

ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿ ಘಟನೆಯ ಬಗ್ಗೆ ತನಿಖೆ ನಡೆಸಲು ರಶ್ಯ, ಚೀನಾ ಸೇರಿದಂತೆ ಅಂತರಾಷ್ಟ್ರೀಯ ಸಮಿತಿ ರಚನೆಯಾಗಬೇಕು ಎಂದು ಪಾಕಿಸ್ತಾನ ರವಿವಾರ ಆಗ್ರಹಿಸಿದೆ.
ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಆಧಾರರಹಿತ ಆರೋಪ ಮಾಡುತ್ತಿದೆ. ಈ ಬಿಕ್ಕಟ್ಟಿನಲ್ಲಿ ರಶ್ಯ, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳು ಸಕಾರಾತ್ಮಕ ಪಾತ್ರ ವಹಿಸಬಹುದು. ಈ ದೇಶಗಳು ಅಂತರಾಷ್ಟ್ರೀಯ ತನಿಖಾ ತಂಡವನ್ನು ರಚಿಸಿ ಭಾರತ ಅಥವಾ ಮೋದಿ ಸತ್ಯ ಹೇಳುತ್ತಿದ್ದಾರೆಯೇ ಎಂಬುದನ್ನು ದೃಢಪಡಿಸಬಹುದು. ಅಂತರಾಷ್ಟ್ರೀಯ ಸಮಿತಿ ಸತ್ಯವನ್ನು ಹೊರತರಲಿ' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.