ನೆತನ್ಯಾಹು ಒಬ್ಬ ಭಯೋತ್ಪಾದಕ: ಪಾಕ್ ಸರಕಾರದ ಹೇಳಿಕೆ
ಇಸ್ಲಾಮಾಬಾದ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಓರ್ವ ಭಯೋತ್ಪಾದಕ ಮತ್ತು ಯುದ್ಧಾಪರಾಧಗಳ ಅಪರಾಧಿಯೆಂದು ಪಾಕಿಸ್ತಾನ ಸರಕಾರ ಪರಿಗಣಿಸಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲಾ ಹೇಳಿದ್ದು ಫೆಲೆಸ್ತೀನೀಯರ ವಿರುದ್ಧದ ಯುದ್ಧಾಪರಾಧಕ್ಕೆ ನೆತನ್ಯಾಹುಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ಇಸ್ರೇಲ್ ಜತೆ ಅಥವಾ ಫೆಲೆಸ್ತೀನೀಯರ ವಿರುದ್ಧ ಯುದ್ಧಾಪರಾಧ ಎಸಗುತ್ತಿರುವ ಪಡೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಕುಮ್ಮಕ್ಕು ನೀಡುವಂತಹ ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಗುರುತಿಸಿ ನಿಷೇಧಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ನಾವು ಇಸ್ರೇಲನ್ನು ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಎಲ್ಲಾ ಉತ್ಪನ್ನಗಳನ್ನೂ ಬಹಿಷ್ಕರಿಸಲಿದ್ದೇವೆ' ಎಂದು ಸನಾವುಲ್ಲಾ ಹೇಳಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಖಂಡಿಸಿ ಮತ್ತು ನೆತನ್ಯಾಹುರನ್ನು ಭಯೋತ್ಪಾದಕರೆಂದು ಘೋಷಿಸಲು ಆಗ್ರಹಿಸಿ ಶುಕ್ರವಾರ ಇಸ್ಲಾಮಾಬಾದ್ನಲ್ಲಿ ಟಿಎಲ್ಪಿ ಪಕ್ಷ ಬೃಹತ್ ರ್ಯಾ ಲಿ ನಡೆಸಿತ್ತು. ಪ್ರತಿಭಟನಾನಿರತರ ಜತೆ ನಡೆಸಿದ ಮಾತುಕತೆ ಸಂದರ್ಭ ರಾಣಾ ಸನಾವುಲ್ಲಾ ಈ ಹೇಳಿಕೆ ನೀಡಿದ್ದಾರೆ.