ಆಕ್ಸ್‌ಫರ್ಡ್ ಕುಲಪತಿ ಹುದ್ದೆಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಇಮ್ರಾನ್ ಖಾನ್
ಇಸ್ಲಾಮಾಬಾದ್: ಸೆರೆಮನೆವಾಸದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಬ್ರಿಟನ್ನ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಪಕ್ಷ ಪ್ರಕಟಿಸಿದೆ.
ಭ್ರಷ್ಟಾಚಾರ ಮತ್ತು ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಕೇವಲ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿರುವುದನ್ನು ಮತ್ತು ತಮ್ಮನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ನಡೆಸಿದ ರಾಜಕೀಯ ಷಡ್ಯಂತ್ರದ ಭಾಗ ಎಂದು 2018 ರಿಂಧ 2022ರ ವರೆಗೆ ದೇಶದ ಪ್ರಧಾನಿಯಾಗಿದ್ದ ಅವರು ಹೇಳಿದ್ದಾರೆ.
"ಇಮ್ರಾನ್ಖಾನ್ ಅರ್ಜಿ ಸಲ್ಲಿಸುವ ಬಯಕೆ ವ್ಯಕ್ತಪಡಿಸಿ ಈ ಸಂಬಂಧ ಸೂಚನೆ ನೀಡಿದ್ದರು ಮತ್ತು ಇದೀಗ ಅರ್ಜಿಯ ಪರಿಶೀಲನೆ ನಡೆಯಲಿದೆ" ಎಂದು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಲಂಡನ್ ವಕ್ತಾರ ಸೈಯದ್ ಜುಲ್ಫೀಕರ್ ಬುಖಾರಿ ಪ್ರಕಟಿಸಿದ್ದಾರೆ.
"ಇದು ಅತ್ಯಂತ ಪ್ರತಿಷ್ಠಿತ, ಗೌರವದ ಮತ್ತು ಮಹತ್ವದ ಹುದ್ದೆಯಾಗಿದ್ದು, ಆಕ್ಸ್ಫರ್ಡ್ನಿಂದ ಹೊರಬಂದವರ ಪೈಕಿ ಅತಿದೊಡ್ಡ ಮತ್ತು ಜನಪ್ರಿಯ ಹೆಸರುಗಳಲ್ಲಿ ಒಂದಾಗಿರುವ ಇಮ್ರಾನ್ಖಾನ್ ಅವರನ್ನು ಕುಲಪತಿಯಾಗಿ ನೋಡುವುದು ನಿಜಕ್ಕೂ ಅದ್ಭುತ" ಎಂದು ಅವರು ಬಣ್ಣಿಸಿದ್ದಾರೆ.
ಹಾಂಕಾಂಗ್ಗೆ ಬ್ರಿಟಿಷ್ ಗವರ್ನರ್ ಆಗಿದ್ದ ಕನ್ಸರ್ವೇಟಿವ್ ಪಕ್ಷದ ಮುಖಂಡ ಕ್ರಿಸ್ ಪ್ಯಾಟೆಲ್ ಅವರು ಆಕ್ಸ್ಫರ್ಡ್ ವಿವಿ ಕುಲಪತಿ ಹುದ್ದೆಯನ್ನು ತ್ಯಜಿಸುವುದಾಗಿ ಕಳೆದ ಫೆಬ್ರುವರಿಯಲ್ಲಿ ಪ್ರಕಟಿಸಿದ್ದರು. 10 ವರ್ಷದ ಅವಧಿಯ ಈ ಹುದ್ದೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ ವರೆಗೂ ಬಹಿರಂಗಪಡಿಸುವುದಿಲ್ಲ ಎಂದು ವಿವಿ ವೆಬ್ಸೈಟ್ ಹೇಳಿದೆ. ಅಕ್ಟೋಬರ್ ಕೊನೆಯ ವೇಳೆಗೆ ಆಯ್ಕೆಗೆ ಮತದಾನ ನಡೆಯಲಿದೆ. ಇಮ್ರಾನ್ಖಾನ್ 1975ರಲ್ಲಿ ಆಕ್ಸ್ಫರ್ಡ್ ವಿವಿಯಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಪದವಿ ಪಡೆದಿದ್ದರು.
ಪಾಕಿಸ್ತಾನದ ಸರ್ವಶ್ರೇಷ್ಠ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದ ಖಾನ್, ಪ್ಲೇಬಾಯ್ ಜೀವನಶೈಲಿಯಿಂದ ಬ್ರಿಟನ್ನ ಗಾಸಿಪ್ ಮ್ಯಾಗಝಿನ್ಗಳಲ್ಲಿ ಸದಾ ಸುದ್ದಿಯಲ್ಲಿದ್ದರು. ಬ್ರಿಟಿಷ್ ಚಿತ್ರನಿರ್ಮಾಪಕಿ ಜಮೈಕಾ ಗೋಲ್ಡ್ಸ್ಮಿತ್ ಅವರನ್ನು ಸೇರಿದಂತೆ ಮೂರು ವಿವಾಹವಾಗಿರುವ ಅವರು ಬಳಿಕ ದಾನಧರ್ಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.