ಫಿಲಿಪ್ಪೀನ್ಸ್ ಅಧ್ಯಕ್ಷರಿಗೆ ಉಪಾಧ್ಯಕ್ಷರಿಂದಲೇ ಜೀವ ಬೆದರಿಕೆ : ಸರಕಾರದ ಹೇಳಿಕೆ

Update: 2024-11-23 16:18 GMT

 ಸಾರಾ ಡ್ಯುಟರ್ಟ್‍ | PC : X \ @indaysara

ಮನಿಲಾ : ಉಪಾಧ್ಯಕ್ಷೆ ಸಾರಾ ಡ್ಯುಟರ್ಟ್‍ರಿಂದ ಅಧ್ಯಕ್ಷರಿಗೆ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್‍ರ ಕಚೇರಿ ಶನಿವಾರ ಹೇಳಿದೆ.

ತನ್ನ ಹತ್ಯೆಗೆ ಪಿತೂರಿ ನಡೆದಿದ್ದು ಒಂದು ವೇಳೆ ಇದರಲ್ಲಿ ಅವರು(ಪಿತೂರಿ ಮಾಡಿದವರು) ಯಶಸ್ವಿಯಾದರೆ ಅಧ್ಯಕ್ಷರನ್ನು ಕೊಲ್ಲುವಂತೆ ತನ್ನ ಭದ್ರತಾ ತಂಡಕ್ಕೆ ಸೂಚಿಸಿರುವುದಾಗಿ ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

`ನನ್ನ ಭದ್ರತಾ ಸಿಬ್ಬಂದಿಯ ಜತೆ ಈಗಾಗಲೇ ಮಾತನಾಡಿದ್ದೇನೆ. ಒಂದು ವೇಳೆ ನನ್ನ ಹತ್ಯೆಯಾದರೆ ತಕ್ಷಣ ಫರ್ಡಿನಾಂಡೊ ಮಾಕ್ರೋಸ್, ಅವರ ಪತ್ನಿ ಲಿಝಾ ಅರನೆಟಾ ಮತ್ತು ಅಧ್ಯಕ್ಷರ ಸೋದರ ಸಂಬಂಧಿ ಮಾರ್ಟಿನ್ ರೊಮುಲ್ಡಜ್‍ರನ್ನು ಕೊಲ್ಲುವಂತೆ ತಿಳಿಸಿದ್ದೇನೆ. ಇದು ತಮಾಷೆಯಲ್ಲ' ಎಂದು ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಸುದ್ದಿಗೋಷ್ಠಿಯ ಬಳಿಕ ಪ್ರತಿಕ್ರಿಯಿಸಿರುವ ಅಧ್ಯಕ್ಷರ ಭವನದ ಸಂವಹನಾ ಕಚೇರಿ `ಈ ಸಕ್ರಿಯ ಬೆದರಿಕೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರ ಭದ್ರತಾ ಕಮಾಂಡ್‍ಗೆ ಸೂಚಿಸಲಾಗಿದೆ. ಅಧ್ಯಕ್ಷರ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅದರಲ್ಲೂ ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ, ಸ್ಪಷ್ಟವಾಗಿ ಬೆದರಿಕೆ ಒಡ್ಡಲಾಗಿದೆ' ಎಂದಿದೆ.

ಅಧ್ಯಕ್ಷ ಮಾರ್ಕೋಸ್ ಮತ್ತು ಉಪಾಧ್ಯಕ್ಷೆ ಡ್ಯುಟರ್ಟ್ ಕುಟುಂಬದ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಿದೆ. ಡ್ಯುಟರ್ಟ್ ವಿರುದ್ಧ ಸಂಸತ್‍ನಲ್ಲಿ ವಾಗ್ದಂಡನೆ ಕ್ರಮಕ್ಕೆ ಮಾರ್ಟಿನ್ ರೊಮುಲ್ಡಜ್ ನಿರ್ಣಯ ಮಂಡಿಸಿದ್ದಾರೆ. ಡ್ಯುಟರ್ಟ್ ಅವರ ತಂದೆ, ಮಾಜಿ ಅಧ್ಯಕ್ಷ ರೋಡ್ರಿಗೊ ಡ್ಯುಟರ್ಟ್ ಜನವರಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾರ್ಕೋಸ್ ಮಾದಕ ದೃವ್ಯ ವ್ಯಸನಿ ಎಂದು ಆರೋಪಿಸಿದಾಗ ಸಾರಾ ಡ್ಯುಟರ್ಟ್ ವ್ಯಂಗ್ಯವಾಗಿ ನಕ್ಕಿದ್ದರು ಎಂದು ಲಿಝಾ ಅರನೆಟಾ ಅಸಮಾಧಾನ ವ್ಯಕ್ತಪಡಿಸಿದ್ದರು. ಮರುದಿನ ಸುದ್ದಿಗೋಷ್ಠಿ ನಡೆಸಿದ್ದ ಮಾರ್ಕೋಸ್ `ಮಾಜಿ ಅಧ್ಯಕ್ಷರು ದೀರ್ಘಾವಧಿಯಿಂದ ಮಾದಕ ದೃವ್ಯ ವ್ಯಸನಿಯಾಗಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಜೂನ್‍ನಲ್ಲಿ ಶಿಕ್ಷಣ ಸಚಿವೆಯ ಸ್ಥಾನಕ್ಕೆ ಸಾರಾ ರಾಜೀನಾಮೆ ನೀಡಿದ್ದರು. ಅವರು ಅಧಿಕಾರದ ಸಂದರ್ಭದಲ್ಲಿ ದುಂದು ವೆಚ್ಚ ನಡೆಸಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದ ಸದನ ಸಮಿತಿಯ ಕಾರ್ಯದಲ್ಲಿ ಸಾರಾ ಅವರ ಭದ್ರತಾ ತಂಡದ ಮುಖ್ಯಸ್ಥೆ ಝುಲೈಕಾ ಲೊಪೆಝ್‍ರನ್ನು ಬುಧವಾರ ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News