ಥೈಲ್ಯಾಂಡ್‍ನಲ್ಲಿ ಲಘು ವಿಮಾನ ಪತನ: 9 ಪ್ರಯಾಣಿಕರ ಸಾವಿನ ಶಂಕೆ
ಬ್ಯಾಂಕಾಕ್: ಥೈಲ್ಯಾಂಡ್‍ನ ದಟ್ಟ ಅರಣ್ಯಪ್ರದೇಶದಲ್ಲಿ ಗುರುವಾರ ಪತನಗೊಂಡಿದ್ದ ಲಘು ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರೂ ಸಾವನ್ನಪ್ಪಿದ್ದಾರೆಂದು ಭಾವಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಕೆಸರು ಮಣ್ಣಿನಿಂದ ಕೂಡಿದ ಅರಣ್ಯದ ಕಂದಕದಲ್ಲಿ ವಿಮಾನ ಪತನಗೊಂಡಿದ್ದು ವಿಮಾನದಲ್ಲಿ ಚೀನಾದ 5 ಪ್ರವಾಸಿಗರು ಮತ್ತು ಇಬ್ಬರು ಪೈಲಟ್‍ಗಳ ಸಹಿತ ಥೈಲ್ಯಾಂಡ್‍ನ 4 ಪ್ರಜೆಗಳಿದ್ದು ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಯಿಲ್ಲ. ಬ್ಯಾಂಕಾಕ್‍ನ ವಿಮಾನ ನಿಲ್ದಾಣದಿಂದ ಗುರುವಾರ ಮಧ್ಯಾಹ್ನ ಟೇಕ್‍ಆಫ್ ಆಗಿದ್ದ ವಿಮಾನ ಪೂರ್ವದ ಟ್ರಾಟ್ ಪ್ರಾಂತಕ್ಕೆ ಪ್ರಯಾಣಿಸುತ್ತಿದ್ದು ಟೇಕಾಫ್ ಆದ 11 ನಿಮಿಷಗಳ ಬಳಿಕ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ. ದಟ್ಟ ಅರಣ್ಯ ಪ್ರದೇಶದಲ್ಲಿ ವಿಮಾನ ಲಂಬವಾಗಿ ನೆಲಕ್ಕೆ ಅಪ್ಪಳಿಸಿದ್ದರಿಂದ ಕೆಸರು ಮಣ್ಣಿನಡಿ ಹೂತುಹೋಗಿದೆ. ಸುಮಾರು 33 ಅಡಿಗಳಷ್ಟು ನೆಲವನ್ನು ಅಗೆದಾಗ ವಿಮಾನದ ಭಾಗಗಳು ಕಂಡುಬಂದಿವೆ. ಜತೆಗೆ ಮೃತದೇಹಗಳ ಭಾಗಗಳೂ ಪತ್ತೆಯಾಗಿದ್ದು ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಚಾಚೊಂಗ್ಸಾವೊ ಪ್ರಾಂತದ ಗವರ್ನರ್ ಚೋನ್ಲೇಟಿ ಯೋಂಗ್ಟ್ರಾಂಗ್ ಹೇಳಿದ್ದಾರೆ.