ಶನಿವಾರ ವ್ಯಾಟಿಕನ್‍ ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ; ನಾಳೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ

Update: 2025-04-22 21:25 IST
ಶನಿವಾರ ವ್ಯಾಟಿಕನ್‍ ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ; ನಾಳೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಪೋಪ್ ಫ್ರಾನ್ಸಿಸ್ | PC : NDTV 

  • whatsapp icon

ವ್ಯಾಟಿಕನ್ ಸಿಟಿ: ಅನಾರೋಗ್ಯದಿಂದ ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ (ಎಪ್ರಿಲ್ 26) ನಡೆಯಲಿದೆ ಎಂದು ವ್ಯಾಟಿಕನ್ ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯಾಟಿಕನ್‍ ನ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಎದುರು ಶನಿವಾರ ಸ್ಥಳೀಯ ಕಾಲಮಾನ 10 ಗಂಟೆಗೆ (ಗ್ರೀನ್‍ವಿಚ್ ಕಾಲಮಾನ 8 ಗಂಟೆಗೆ ) ಪೋಪ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಫ್ರಾನ್ಸಿಸ್ ಅವರ ಇಚ್ಛೆಯಂತೆ ಮೃತದೇಹವನ್ನು ವ್ಯಾಟಿಕನ್‍ ನ ಹೊರಗಡೆಯಿರುವ ಸೈಂಟ್ ಮೇರಿ ಬ್ಯಾಸಿಲಿಕಾದಲ್ಲಿ ಸಮಾಧಿ ಮಾಡಲಾಗುವುದು.

ಮಂಗಳವಾರ ಬೆಳಿಗ್ಗೆ ವ್ಯಾಟಿಕನ್ ನಗರದಲ್ಲಿ ಸಭೆ ಸೇರಿದ ಕಾರ್ಡಿನಲ್‍ ಗಳು ಅಂತ್ಯಕ್ರಿಯೆಯ ದಿನಾಂಕವನ್ನು ನಿರ್ಧರಿಸಿದರು ಎಂದು ವರದಿಯಾಗಿದೆ. ಅಂತ್ಯಕ್ರಿಯೆಗೂ ಮುನ್ನ ಪೋಪ್ ಅವರ ಮೃತದೇಹವನ್ನು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ತೆರೆದ ಪೆಟ್ಟಿಗೆಯಲ್ಲಿ ಇರಿಸಿ ಅಂತಿಮ ಗೌರವ ಸಲ್ಲಿಸಲು ಸಾರ್ವಜನಿಕರಿಗೆ ಬುಧವಾರ(ಎಪ್ರಿಲ್ 23)ದಿಂದ ಅವಕಾಶ ಕಲ್ಪಿಸಲಾಗಿದೆ.

ವ್ಯಾಟಿಕನ್‍ ನ ಚರ್ಚ್ ಸೋಮವಾರ ಪೋಪ್ ಫ್ರಾನ್ಸಿಸ್ ಅವರ ನಿಧನವನ್ನು ಘೋಷಿಸಿದ ಬಳಿಕ ವಿಶ್ವದಾದ್ಯಂತದ ಪ್ರಾರ್ಥನಾ ಮಂದಿರಗಳು, ಚರ್ಚ್‍ಗಳಲ್ಲಿ ಗಂಟೆಗಳನ್ನು ಮೊಳಗಿಸಲಾಯಿತು ಮತ್ತು ಇಟಲಿ, ಭಾರತ, ತೈವಾನ್ ಮತ್ತು ಅಮೆರಿಕದಲ್ಲಿ ಧ್ವಜಗಳನ್ನು ಅರ್ಧಮಟ್ಟಕ್ಕೆ ಇಳಿಸಲಾಯಿತು. ಅರ್ಜೆಂಟೀನಾದ ಸ್ಯಾನ್ ಲೊರೆಂಝೋ ಫುಟ್‍ಬಾಲ್ ಕ್ಲಬ್‍ನ ಅಭಿಮಾನಿಯಾಗಿದ್ದ ಪೋಪ್ ಅವರ ಗೌರವಾರ್ಥ ಇಟಲಿ ಮತ್ತು ಅರ್ಜೆಂಟೀನಾದಲ್ಲಿ ನಡೆಯುತ್ತಿದ್ದ ಫುಟ್‍ಬಾಲ್ ಪಂದ್ಯಗಳನ್ನು ಅಮಾನತುಗೊಳಿಸಲಾಗಿದೆ.

ಅಂತ್ಯಕ್ರಿಯೆಯ ಬಳಿಕ 9 ದಿನಗಳ ಅಧಿಕೃತ ಶೋಕಾಚರಣೆ ನಡೆಯುತ್ತದೆ. ಈ ಅವಧಿಯಲ್ಲಿ ಕಾರ್ಡಿನಲ್‍ ಗಳು ರೋಮ್‍ ಗೆ ಆಗಮಿಸುತ್ತಾರೆ ಮತ್ತು ಸಮಾವೇಶದ ಮೊದಲು ಖಾಸಗಿಯಾಗಿ ಸಭೆ ನಡೆಸುತ್ತಾರೆ. ಎಲ್ಲರೂ ಸಮಾವೇಶದಲ್ಲಿ ಭಾಗಿಯಾಗಲು ಸಮಯಾವಕಾಶ ನೀಡುವ ಉದ್ದೇಶದಿಂದ `ವೇಕೆಂಟ್ ಸೀ' ಘೋಷಣೆಯಾದ 15ರಿಂದ 20 ದಿನಗಳ ಬಳಿಕ ಸಮಾವೇಶ ಆರಂಭಗೊಳ್ಳುತ್ತದೆ. ಕಾರ್ಡಿನಲ್‍ ಗಳು ಒಪ್ಪಿದರೆ ಅದು ಬೇಗನೇ ಪ್ರಾರಂಭವಾಗಬಹುದು.

(`ವೇಕೆಂಟ್ ಸೀ' ಎಂದರೆ ಪೋಪ್ ಹುದ್ದೆ ಖಾಲಿಯಿರುವ ಅವಧಿ. ಪೋಪ್ ಅವರ ನಿಧನ ಅಥವಾ ರಾಜೀನಾಮೆ ಮತ್ತು ಹೊಸ ಪೋಪ್ ಆಯ್ಕೆಯ ನಡುವಿನ ಅವಧಿ. ಈ ಅವಧಿಯಲ್ಲಿ ಕಾರ್ಡಿನಲ್‍ ಗಳ ಸಮಿತಿ ಚರ್ಚ್‍ನ ಆಡಳಿತ ನಿರ್ವಹಿಸುತ್ತದೆ.)

ಸಮಾವೇಶ ಆರಂಭಗೊಂಡ ಬಳಿಕ ರಹಸ್ಯ ಅಧಿವೇಶನದಲ್ಲಿ ಕಾರ್ಡಿನಲ್‍ ಗಳು ಮತ ಚಲಾಯಿಸುತ್ತಾರೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಪತ್ರಗಳನ್ನು ವಿಶೇಷ ಸ್ಟವ್‍ ನಲ್ಲಿ ಸುಟ್ಟುಹಾಕಲಾಗುತ್ತದೆ. ಸ್ಟವ್‍ ನಿಂದ ಕಪ್ಪು ಹೊಗೆ ಎದ್ದರೆ ಯಾವುದೇ ಪೋಪ್ ಆಯ್ಕೆಗೊಂಡಿಲ್ಲ ಎಂದರ್ಥ, ಬಿಳಿ ಹೊಗೆ ಎದ್ದರೆ ಕಾರ್ಡಿನಲ್‍ ಗಳು ಕ್ಯಾಥೊಲಿಕ್ ಚರ್ಚ್‍ಗಳ ಮುಂದಿನ ಮುಖ್ಯಸ್ಥರನ್ನು ಆಯ್ಕೆ ಮಾಡಿದರು ಎಂದರ್ಥ. ಮೂರನೇ ಎರಡರಷ್ಟು ಮತ ಪಡೆದವರು ಗೆಲ್ಲುತ್ತಾರೆ. ಅವರು ಒಪ್ಪಿಕೊಂಡರೆ ಅವರ ಆಯ್ಕೆಯನ್ನು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಗ್ಯಾಲರಿಯಿಂದ ಘೋಷಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News