ಪೋಪ್ ನಿಧನದ ಬಳಿಕ ಮುಂದೇನಾಗುತ್ತದೆ?; ವ್ಯಾಟಿಕನ್ ನಿಯಮಗಳು ಏನು ಹೇಳುತ್ತವೆ?

ಪೋಪ್ ಫ್ರಾನ್ಸಿಸ್ | PC : X
ವ್ಯಾಟಿಕನ್: ವಿಶ್ವಾದ್ಯಂತ 140 ಕೋಟಿ ಕ್ಯಾಥೋಲಿಕ್‌ರ ಧಾರ್ಮಿಕ ಮುಖ್ಯಸ್ಥ ಪೋಪ್ ಫ್ರಾನ್ಸಿಸ್(88) ನಿಧನರಾಗಿದ್ದಾರೆ. ವಿವಿಧ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ನಿಧನದಿಂದಾಗಿ ಕ್ಯಾಥೋಲಿಕ್ ಕ್ರೈಸ್ತರ ಅತ್ಯುನ್ನತ ಹುದ್ದೆ ತೆರವಾಗಿದ್ದು, ವ್ಯಾಟಿಕನ್‌ನಲ್ಲಿ ಸುದೀರ್ಘ ಪ್ರಕ್ರಿಯೆಯ ಮೂಲಕ ಅದನ್ನು ಭರ್ತಿ ಮಾಡಬೇಕಿದೆ.
ಪೋಪ್ ಮರಣದ ಬಳಿಕ ವ್ಯಾಟಿಕನ್ ಪ್ರಭುತ್ವಾಂತರ ಅವಧಿಯನ್ನು ಪ್ರವೇಶಿಸುತ್ತದೆ. ಇದು ಪೋಪ್ ಮರಣ ಮತ್ತು ನೂತನ ಪೋಪ್ ಆಯ್ಕೆಯ ನಡುವಿನ ಅವಧಿಯಾಗಿದೆ. ವ್ಯಾಟಿಕನ್ ಆಸ್ತಿ ಮತ್ತು ಆದಾಯದ ಆಡಳಿತಗಾರರಾಗಿರುವ ‘ಕ್ಯಾಮರ್ಲೆಂಗೊ’ ಮೊದಲು ಸಾವನ್ನು ಪರಿಶೀಲಿಸುತ್ತಾರೆ. ಅವರು ಪೋಪ್‌ರ ಬ್ಯಾಪ್ಟಿಸಮ್ ಹೆಸರನ್ನು ಮೂರು ಸಲ ಕರೆಯುವ ಮುನ್ನ ಈ ಪ್ರಕ್ರಿಯೆಯನ್ನು ನಡೆಸುತ್ತಾರೆ. ಯಾವುದೇ ಪ್ರತಿಕ್ರಿಯೆಯಿಲ್ಲದಿದ್ದರೆ ಪೋಪ್ ನಿಧನರಾಗಿದ್ದಾರೆ ಎಂದು ಅವರು ಘೋಷಿಸುತ್ತಾರೆ. ಪೋಪ್ ನಿಧನದ ಬಳಿಕ ಅವರ ಹಣೆಯನ್ನು ತಟ್ಟಲು ಸಣ್ಣ ಬೆಳ್ಳಿಯ ಸುತ್ತಿಗೆಯನ್ನು ಬಳಸುವ ಪರಿಪಾಠವು 1963ರ ಬಳಿಕ ಕೊನೆಗೊಂಡಿತ್ತು.
ಬಳಿಕ ವ್ಯಾಟಿಕನ್ ತನ್ನ ಅಧಿಕೃತ ಮಾರ್ಗಗಳ ಮೂಲಕ ಪೋಪ್ ನಿಧನರಾಗಿರುವ ವಿಷಯವನ್ನು ಜಗತ್ತಿಗೆ ತಿಳಿಸುತ್ತದೆ.
ಇಷ್ಟಾದ ಬಳಿಕ ಕ್ಯಾಮರ್ಲೆಂಗೊ ಪೋಪ್‌ರ ಅಪಾರ್ಟ್‌ಮೆಂಟ್‌ಗೆ ಬೀಗ ಹಾಕುತ್ತಾರೆ. ಈ ಹಿಂದೆ ಲೂಟಿ ಮಾಡುವುದನ್ನು ತಡೆಯಲು ಇದನ್ನು ಮಾಡಲಾಗುತ್ತಿತ್ತು. ಬಳಿಕ ಕ್ಯಾಮರ್ಲೆಂಗೊ ಪೋಪ್ ಧರಿಸಿದ್ದ ಉಂಗುರ(ಫಿಷರಮನ್ಸ್ ರಿಂಗ್) ಮತ್ತು ಅವರ ಮುದ್ರೆ(ಸೀಲ್)ಯನ್ನು ನಾಶಗೊಳಿಸಲು ವ್ಯವಸ್ಥೆಯನ್ನು ಮಾಡುತ್ತಾರೆ. ಇದು ಅವರ ಆಡಳಿತದ ಅಂತ್ಯವನ್ನು ಸಂಕೇತಿಸುತ್ತದೆ.
ಪೋಪ್ ಸ್ಥಿತ್ಯಂತರವನ್ನು ನಿಯಂತ್ರಿಸುವ ಯೂನಿವರ್ಸಿ ಡೊಮಿನಿಸಿ ಗ್ರೆಗಿಸ್ ಸಂವಿಧಾನವು ಪೋಪ್ ನಿಧನದ ಬಳಿಕ 4-6 ದಿನಗಳ ಒಳಗೆ ಅವರ ಅಂತ್ಯಸಂಸ್ಕಾರ ನಡೆಯಬೇಕು ಎಂದು ಹೇಳುತ್ತದೆ. ಪೋಪ್ ತನ್ನನ್ನು ಬೇರೆ ಕಡೆಗೆ ಸಮಾಧಿ ಮಾಡುವಂತೆ ಸೂಚಿಸಿರದಿದ್ದರೆ ಅವರ ಪಾರ್ಥಿವ ಶರೀರವನ್ನು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಹೂಳಲಾಗುತ್ತದೆ. ನಂತರ ಒಂಭತ್ತು ದಿನಗಳ ಶೋಕಾಚರಣೆ ಇರುತ್ತದೆ.
ಹೊಸ ಪೋಪ್ ಆಯ್ಕೆ
ಪೋಪ್ ನಿಧನದ ಸುಮಾರು 15-20 ದಿನಗಳ ಬಳಿಕ ತಮ್ಮ ಮುಂದಿನ ಪೋಪ್ ಆಯ್ಕೆ ಮಾಡಲು ಪೋಪ್ ಸಮಾವೇಶವು ಆರಂಭಗೊಳ್ಳುತ್ತದೆ. ಈ ರಹಸ್ಯ ಪ್ರಕ್ರಿಯೆಗಾಗಿ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಡಿನಲ್‌ಗಳು ವ್ಯಾಟಿಕನ್‌ನಲ್ಲಿ ಸೇರುತ್ತಾರೆ. ಅವರು ಪೋಪ್ ಆಯ್ಕೆಯಾಗುವವರೆಗೂ ಸಿಸ್ಟಿನ್ ಚಾಪೆಲ್‌ನ ಒಳಗೇ ಇರುತ್ತಾರೆ. ಹೊರಜಗತ್ತಿನೊಂದಿಗೆ ಅವರ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಅವರು ಯಾವುದೇ ಮಾಧ್ಯಮ ಅಥವಾ ಪೋನ್ ಸಂಪರ್ಕವನ್ನು ಹೊಂದಿರುವುದಿಲ್ಲ.
ನಂತರ ಕಾರ್ಡಿನಲ್‌ಗಳು ಅಭ್ಯರ್ಥಿಯೋರ್ವ ಮೂರನೇ ಎರಡರಷ್ಟು ಬಹುಮತ ಪಡೆಯುವವರೆಗೆ ಹಲವಾರು ಸುತ್ತುಗಳಲ್ಲಿ ಮತಗಳನ್ನು ಚಲಾಯಿಸುತ್ತಾರೆ ಮತ್ತು ಪ್ರತಿ ಸುತ್ತಿನ ನಂತರ ಮತಪತ್ರಗಳನ್ನು ಸುಡಲಾಗುತ್ತದೆ. ಕಪ್ಪು ಹೊಗೆಯು ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎನ್ನುವುದನ್ನು ಸೂಚಿಸಿದರೆ ಬಿಳಿಯ ಹೊಗೆಯು ನೂತನ ಪೋಪ್ ಆಯ್ಕೆಯನ್ನು ಸೂಚಿಸುತ್ತದೆ.
ನೂತನ ಪೋಪ್‌ರ ಘೋಷಣೆ
ನೂತನ ಪೋಪ್ ಆಯ್ಕೆಯಾದ ಬಳಿಕ ಅವರು ತನ್ನ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದರೆಯೇ ಎಂದು ಅವರನ್ನು ಔಪಚಾರಿಕವಾಗಿ ಕೇಳಲಾಗುತ್ತದೆ. ಅವರು ಒಪ್ಪಿದರೆ ಪೋಪ್ ಆಗಿ ತನ್ನ ಹೊಸ ಹೆಸರನ್ನು ಅವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.. ಹೆಚ್ಚಾಗಿ ಈ ಹೆಸರುಗಳು ಹಿಂದಿನ ಸಂತರಿಂದ ಪ್ರೇರಿತವಾಗಿರುತ್ತವೆ.
ಬಳಿಕ ಹಿರಿಯ ಕಾರ್ಡಿನಲ್ ಡೀಕನ್ ಅವರು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಬಾಲ್ಕನಿಯಿಂದ ‘ಹೆಬೆಮುಸ್ ಪಾಪಮ್(ನಾವು ಪೋಪ್‌ರನ್ನು ಹೊಂದಿದ್ದೇವೆ)’ ಎಂದು ಲ್ಯಾಟಿನ್ ಭಾಷೆಯಲ್ಲಿ ಘೋಷಿಸುತ್ತಾರೆ. ಕೆಲವು ಕ್ಷಣಗಳ ಬಳಿಕ ನೂತನ ಪೋಪ್ ಸೈಂಟ್ ಪೀಟರ್ಸ್ ಚೌಕದಲ್ಲಿ ತಮ್ಮ ಅನುಯಾಯಿಗಳಿಗೆ ಶುಭ ಹಾರೈಸುತ್ತಾರೆ ಮತ್ತು ಪೋಪ್ ಆಗಿ ತನ್ನ ಪ್ರಥಮ ಆಶೀರ್ವಾದಗಳನ್ನು ನೀಡುತ್ತಾರೆ.