ಪೋಪ್ ಫ್ರಾನ್ಸಿಸ್ ಫೆಲೆಸ್ತೀನಿಯಾದ `ನಿಷ್ಠಾವಂತ ಮಿತ್ರ': ಮಹ್ಮೂದ್ ಅಬ್ಬಾಸ್

ಮಹ್ಮೂದ್ ಅಬ್ಬಾಸ್ , ಪೋಪ್ ಫ್ರಾನ್ಸಿಸ್ | PC : X
ರಮಲ್ಲಾ: ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಫೆಲೆಸ್ತೀನಿಯನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ `ಪೋಪ್ ಫ್ರಾನ್ಸಿಸ್ ಫೆಲೆಸ್ತೀನಿಯನ್ನರ ಆತ್ಮೀಯ ಮಿತ್ರರಾಗಿದ್ದರು' ಎಂದಿದ್ದಾರೆ.
` ಈ ದಿನ ನಾವು ಫೆಲೆಸ್ತೀನಿಯನ್ ಜನರ ಮತ್ತು ಅವರ ಕಾನೂನುಬದ್ಧ ಹಕ್ಕುಗಳ ನಿಷ್ಠಾವಂತ ಮಿತ್ರರೊಬ್ಬರನ್ನು ಕಳೆದುಕೊಂಡಿದ್ದೇವೆ. ಫ್ರಾನ್ಸಿಸ್ ಅವರು ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಮಾನ್ಯತೆ ನೀಡಿದ್ದರು ಮತ್ತು ವ್ಯಾಟಿಕನ್ ನಲ್ಲಿ ಫೆಲೆಸ್ತೀನಿಯನ್ ಧ್ವಜವನ್ನು ಅರಳಿಸಲು ಅಧಿಕಾರ ನೀಡಿದರು ಎಂದು ಮಹ್ಮೂದ್ ಅಬ್ಬಾಸ್ ಗೌರವ ಸಲ್ಲಿಸಿರುವುದಾಗಿ ಫೆಲೆಸ್ತೀನಿಯನ್ ಸುದ್ದಿ ಸಂಸ್ಥೆ `ವಫಾ' ವರದಿ ಮಾಡಿದೆ.
`ಗಾಝಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವನ್ನು ಪೋಪ್ ಕಟುವಾಗಿ ವಿರೋಧಿಸಿದ್ದರು. ಅವರು ಫೆಲೆಸ್ತೀನಿಯನ್ ಜನರ ನ್ಯಾಯಸಮ್ಮತ ಹಕ್ಕುಗಳ ಅಚಲ ಪ್ರತಿಪಾದಕರಾಗಿದ್ದರು. ಯುದ್ಧದ ವಿರುದ್ಧ ಮತ್ತು ಗಾಝಾದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ನಮ್ಮ ಜನರ ವಿರುದ್ಧ ನಡೆದ ನರಮೇಧ ಕೃತ್ಯಗಳನ್ನು ವಿರೋಧಿಸುವಲ್ಲಿ ಅಚಲ ನಿಲುವು ತಳೆದಿದ್ದರು' ಎಂದು ಹಮಾಸ್ ನ ವರಿಷ್ಠ ಅಧಿಕಾರಿ ಬಾಸ್ಸೆಮ್ ನಯೀಮ್ ಶ್ರದ್ದಾಂಜಲಿ ಸಂದೇಶದಲ್ಲಿ ಹೇಳಿದ್ದಾರೆ.
ನಿಧನ ಹೊಂದುವುದಕ್ಕಿಂತ ಒಂದು ದಿನ ಮೊದಲು ತಮ್ಮ ಈಸ್ಟರ್ ಸಂದೇಶದಲ್ಲೂ ಗಾಝಾ ಯುದ್ಧವನ್ನು ಫ್ರಾನ್ಸ್ ಉಲ್ಲೇಖಿಸಿದ್ದರು. ಗಾಝಾದಲ್ಲಿನ ಶೋಚನೀಯ ಮಾನವೀಯ ಪರಿಸ್ಥಿತಿಯನ್ನು ಖಂಡಿಸಿದ್ದ ಅವರು ಕದನ ವಿರಾಮದ ಆಗ್ರಹವನ್ನು ಪುನರುಚ್ಚರಿಸಿದ್ದರು. ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಅರಬ್ ಲೀಗ್ ಮುಖ್ಯಸ್ಥ ಅಹ್ಮದ್ ಅಬೌಲ್ ಘಯೆಟ್ `ಇಸ್ರೇಲ್ ನ ಕ್ರೂರತೆಯನ್ನು ಖಂಡಿಸುವ ಅವರ ಧ್ವನಿ ಅಂತಿಮ ಕ್ಷಣದವರೆಗೂ ಜೋರಾಗಿತ್ತು ಮತ್ತು ಸ್ಪಷ್ಟವಾಗಿತ್ತು. ಫೆಲೆಸ್ತೀನಿಯನ್ ವಿಷಯದ ಕುರಿತ ಪೋಪ್ ಅವರ ದಿಕ್ಸೂಚಿ ಯಾವಾಗಲೂ ಸರಿಯಾದ ದಿಕ್ಕನ್ನೇ ತೋರಿಸುತ್ತಿತ್ತು. ಇಸ್ರೇಲ್ ನ ಆಕ್ರಮಣಶೀಲತೆ ಮತ್ತು ಬಾಂಬ್‍ದಾಳಿಯನ್ನು ಸಹಿಸಿಕೊಂಡಿದ್ದ ಗಾಝಾ ನಿವಾಸಿಗಳ ಜತೆ ಕಳೆದ ಹಲವು ತಿಂಗಳುಗಳಲ್ಲಿ ನೇರ ಕರೆಗಳ ಮೂಲಕ ದೈನಂದಿನ ಸಂವಹನ ನಡೆಸುತ್ತಿದ್ದರು' ಎಂದು ಸ್ಮರಿಸಿಕೊಂಡಿದ್ದಾರೆ.