ನಿರಾಶ್ರಿತರು, ಶೋಷಿತರ ಜಾಗತಿಕ ಧ್ವನಿ ಪೋಪ್ ಫ್ರಾನ್ಸಿಸ್ ನಿಧನ

Update: 2025-04-21 13:59 IST
ನಿರಾಶ್ರಿತರು, ಶೋಷಿತರ ಜಾಗತಿಕ ಧ್ವನಿ ಪೋಪ್ ಫ್ರಾನ್ಸಿಸ್ ನಿಧನ

ಪೋಪ್‌ ಫ್ರಾನ್ಸಿಸ್‌ (Photo: PTI) 

  • whatsapp icon

ವ್ಯಾಟಿಕನ್ ಸಿಟಿ: ತನ್ನ ವಿನಮ್ರ ಶೈಲಿ ಮತ್ತು ಬಡವರ ಕುರಿತು ಕಾಳಜಿಯಿಂದಾಗಿ ಜಗತ್ತನ್ನು ಮೋಡಿ ಮಾಡಿದ್ದ ಪೋಪ್ ಫ್ರಾನ್ಸಿಸ್(88) ಅವರು ಸೋಮವಾರ ನಿಧನರಾದರು. ತನ್ನ 12 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಕಾಯಿಲೆಗಳಿಂದ ಬಳಲಿದ್ದ ಪೋಪ್ ಇತ್ತೀಚೆಗಷ್ಟೇ ಡಬಲ್ ನ್ಯುಮೋನಿಯಾದ ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿದ್ದರು.

‘ಆತ್ಮೀಯ ಸೋದರರು ಮತ್ತು ಸೋದರಿಯರೇ, ನಮ್ಮ ಪವಿತ್ರ ಫಾದರ್ ಫ್ರಾನ್ಸಿಸ್ ಅವರ ನಿಧನವನ್ನು ನಾನು ಅತೀವ ದುಃಖದಿಂದ ಘೋಷಿಸುತ್ತಿದ್ದೇನೆ’ ಎಂದು ಕಾರ್ಡಿನಲ್ ಕೆವಿನ್ ಫ್ಯಾರೆಲ್ ಅವರು ವ್ಯಾಟಿಕನ್ನ ಟಿ.ವಿ. ಚಾನೆಲ್‌ ನಲ್ಲಿ ಪ್ರಕಟಿಸಿದರು.

ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಗ್ಗೆ 7:35ಕ್ಕೆ ನಿಧನರಾದರು. ಅವರ ಇಡೀ ಜೀವನವು ಭಗವಂತನ ಮತ್ತು ಚರ್ಚ್ ಸೇವೆಗೆ ಸಮರ್ಪಿತವಾಗಿತ್ತು ಎಂದು ಫ್ಯಾರೆಲ್ ಪ್ರಕಟಣೆಯಲ್ಲಿ ತಿಳಿಸಿದರು.

ಈಸ್ಟರ್ ರವಿವಾರದಂದು ವ್ಯಾಟಿಕನ್‌ ನ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಅನುಯಾಯಿಗಳಲ್ಲಿ ಸಂತಸವನ್ನು ಮೂಡಿಸಿದ್ದ ಪೋಪ್ ಫ್ರಾನ್ಸಿಸ್ ಈಸ್ಟರ್ ಸೋಮವಾರ ಇಹಲೋಕ ತ್ಯಜಿಸಿದರು.

2013ರಲ್ಲಿ ತನ್ನ ಪೂರ್ವಾಧಿಕಾರಿ 16ನೇ ಬೆನೆಡಿಕ್ಟ್ ರಾಜೀನಾಮೆಯ ಬಳಿಕ ಅವರು ಪೋಪ್ ಆಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

ಫೆ.14ರಂದು ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಪೋಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ನಂತರದ ದಿನಗಳಲ್ಲಿ ಅವರು ಡಬಲ್ ನ್ಯುಮೋನಿಯಾದಿಂದ ಬಳಲುತ್ತಿದ್ದುದು ಪತ್ತೆಯಾಗಿತ್ತು. ಅವರು ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ಮೂತ್ರಪಿಂಡ ವೈಫಲ್ಯದ ಆರಂಭಿಕ, ಸೌಮ್ಯ ಲಕ್ಷಣಗಳೂ ಕಾಣಿಸಿಕೊಂಡಿದ್ದವು.

ಐದು ವಾರಗಳಲ್ಲಿ ಅವರ ದೇಹಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದ್ದು,ಮಾ.23ರಂದು ಆಸ್ಪತ್ರೆಯ ಬಾಲ್ಕನಿಯಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಮತ್ತು ಆಸ್ಪತ್ರೆಯ ಹೊರಗೆ ನೆರೆದಿದ್ದ ಜನಸಮೂಹಕ್ಕೆ ತನ್ನ ಹೆಬ್ಬೆರಳನ್ನು ಎತ್ತಿ ತಾನು ಚೆನ್ನಾಗಿದ್ದೇನೆ ಎಂಬ ಸಂಕೇತವನ್ನು ನೀಡಿದ್ದರು.

ಬಳಿಕ ಅವರು ವೈದ್ಯರ ಸೂಚನೆಯಂತೆ ಎರಡು ತಿಂಗಳು ವಿಶ್ರಾಂತಿಯನ್ನು ಪಡೆಯಲು ಮತ್ತು ಚೇತರಿಸಿಕೊಳ್ಳಲು ವ್ಯಾಟಿಕನ್‌ ಗೆ ಮರಳಿದ್ದರು.

ಎ.19ರಂದು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರನ್ನು ಭೇಟಿಯಾಗಿದ್ದರು.

ಪೋಪ್ ಈ ಹಿಂದೆ ಮಾರ್ಚ್ 2023ರಲ್ಲಿ ಉಸಿರಾಟದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ವರ್ಷ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2021ರಲ್ಲಿ ಅವರಿಗೆ ದೊಡ್ಡಕರುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರು ಯುವಕರಾಗಿದ್ದಾಗ ಅವರ ಶ್ವಾಸಕೋಶದ ಭಾಗವೊಂದನ್ನು ಸಹ ತೆಗೆಯಲಾಗಿತ್ತು.

ಮಂಡಿ ನೋವಿನಿಂದ ಬಳಲುತ್ತಿದ್ದ ಫ್ರಾನ್ಸಿಸ್ ಅದರಿಂದಾಗಿ ಗಾಲಿಕುರ್ಚಿಯನ್ನು ಬಳಸುವಂತಾಗಿತ್ತು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಅವರು ಎರಡು ಸಲ ಬಿದ್ದಿದ್ದರು.

►ಅಂತ್ಯಸಂಸ್ಕಾರ

ಫ್ರಾನ್ಸಿಸ್ 100 ವರ್ಷಕ್ಕೂ ಹೆಚ್ಚಿನ ಅವಧಿಯ ಬಳಿಕ ವ್ಯಾಟಿಕನ್ನ ಹೊರಗೆ ಚಿರವಿಶ್ರಾಂತಿಯನ್ನು ಪಡೆಯಲಿರುವ ಮೊದಲ ಪೋಪ್ ಆಗಲಿದ್ದಾರೆ. ತನ್ನ ಪಾರ್ಥಿವ ಶರೀರವನ್ನು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಬದಲು ರೋಮ್‌ ನ ಸಾಂತಾ ಮರಿಯಾ ಮ್ಯಾಗ್ಗೋರಿ ಬ್ಯಾಸಿಲಿಕಾದಲ್ಲಿ ಸಮಾಧಿ ಮಾಡಬೇಕೆಂದು ಅವರು ಬಯಸಿದ್ದರು.

ಪೋಪ್‌ ಗಳು ಮೂರು ಶವಪೆಟ್ಟಿಗೆಗಳನ್ನು ಹೊಂದಿರುವ ಸಂಪ್ರದಾಯವನ್ನೂ ಅವರು ತಿರಸ್ಕರಿಸಿದ್ದರು. ಬದಲಿಗೆ ತನ್ನ ವಿನಮ್ರ ಪಾದ್ರಿಯ ಪಾತ್ರವನ್ನು ಪ್ರತಿಬಿಂಬಿಸುವ ಕಟ್ಟಿಗೆ ಮತ್ತು ಸತುವಿನಿಂದ ನಿರ್ಮಿತ ಕೇವಲ ಒಂದೇ ಶವಪೆಟ್ಟಿಗೆಯಲ್ಲಿ ಸಮಾಧಿಯನ್ನು ಆಯ್ಕೆ ಮಾಡಿಕೊಂಡಿದ್ದರು.

►ಪರಂಪರೆ

ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೊ ಬೆರ್ಗೊಗ್ಲಿಯೊ ಆಗಿ ಜನಿಸಿದ್ದ ಫ್ರಾನ್ಸಿಸ್ ವಿಶ್ವದ ಸುಮಾರು 140 ಕೋ.ಕೆಥೊಲಿಕ್ರನ್ನು ಮುನ್ನಡೆಸಿದ್ದ ಮೊದಲ ಜೆಸ್ಯೂಟ್ ಮತ್ತು ಮೊದಲ ಲ್ಯಾಟಿನ್ ಅಮೆರಿಕನ್ ಆಗಿದ್ದರು. ಮಾ.13,2013ರಂದು ತನ್ನ 76ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆ ಆಗಿದ್ದು, ಇದು ಅವರನ್ನು ಬಾಹ್ಯ ವ್ಯಕ್ತಿಯೆಂದೇ ಪರಿಗಣಿಸಿದ್ದ ಅನೇಕ ಮಂದಿಗೆ ಅಚ್ಚರಿಯನ್ನುಂಟು ಮಾಡಿತ್ತು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಗರಣದಿಂದಾಗಿ ಜಾಗತಿಕ ನಿಗಾಕ್ಕೊಳಪಟ್ಟಿದ್ದ ಮತ್ತು ವ್ಯಾಟಿಕನ್ ಅಧಿಕಾರಶಾಹಿಯಲ್ಲಿನ ಆಂತರಿಕ ಕಲಹಗಳಿಂದ ಛಿದ್ರಗೊಂಡಿದ್ದ ಚರ್ಚ್‌ ನ ನೇತೃತ್ವವನ್ನು ಪಡೆದಿದ್ದ ಫ್ರಾನ್ಸಿಸ್ ನಂತರದ ವರ್ಷಗಳಲ್ಲಿ ಅದನ್ನು ಹೆಚ್ಚು ಮುಕ್ತ ಮತ್ತು ಸಹಾನುಭೂತಿಯ ಚರ್ಚ್‌ ಆಗಿ ರೂಪಿಸಲು ಪ್ರಯತ್ನಿಸಿದ್ದರು.

ಪೋಪ್ ಫ್ರಾನ್ಸಿಸ್ ತನ್ನ ಅಧಿಕಾರಾವಧಿಯಲ್ಲಿ ಸಂಪ್ರದಾಯವಾದಿಗಳು ಮತ್ತು ಪ್ರಗತಿಪರರಿಂದ ಟೀಕೆಗಳನ್ನು ಎದುರಿಸಿದ್ದರು. ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯಗಳನ್ನು ಅವರು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂದು ಸಂಪ್ರದಾಯವಾದಿಗಳು ಆರೋಪಿಸಿದ್ದರೆ, 2,000 ವರ್ಷಗಳಷ್ಟು ಹಳೆಯದಾದ ಚರ್ಚ್‌ ಅನ್ನು ಮರುರೂಪಿಸಲು ಅವರು ಇನ್ನೂ ಹೆಚ್ಚಿನದನ್ನು ಮಾಡಬೇಕಿತ್ತು ಎಂದು ಪ್ರಗತಿಪರರು ಭಾವಿಸಿದ್ದರು.

ಆಂತರಿಕ ಭಿನ್ನಾಭಿಪ್ರಾಯಗಳೊಂದಿಗೆ ಹೋರಾಡುತ್ತಿದ್ದರೂ ಅವರು ಸಾಮಾಜಿಕ ನ್ಯಾಯ,ವಲಸಿಗರ ಹಕ್ಕುಗಳು ಮತ್ತು ಪರಿಸರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು ಹಾಗೂ ಪಾದ್ರಿಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪಿಡುಗಿಗೆ ಕಡಿವಾಣ ಹಾಕಲು ಶ್ರಮಿಸಿದ್ದರು.

ತನ್ನ 12 ವರ್ಷಗಳ ಅವಧಿಯಲ್ಲಿ ವ್ಯಾಟಿಕನ್ನ ಅಧಿಕಾರಶಾಹಿಯನ್ನು ಮರುಸಂಘಟಿಸಿದ್ದ ಅವರು ನಾಲ್ಕು ಪ್ರಮುಖ ಬೋಧನಾ ದಾಖಲೆಗಳನ್ನು ರಚಿಸಿದ್ದರು. 65ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದರು ಮತ್ತು 900ಕ್ಕೂ ಅಧಿಕ ಮಂದಿಗೆ ಸಂತ ಪದವಿ ನೀಡಿದ್ದರು. ಮಹಿಳೆಯರ ದೀಕ್ಷೆ ಮತ್ತು ಚರ್ಚ್ನ ಲೈಂಗಿಕ ಬೋಧನೆಗಳಲ್ಲಿ ಬದಲಾವಣೆಯಂತಹ ವಿವಾದಾತ್ಮಕ ವಿಷಯಗಳ ಚರ್ಚೆಗಾಗಿ ಜಗತ್ತಿನ ಕೆಥೊಲಿಕ್ ಬಿಷಪ್‌ ಗಳ ಐದು ಪ್ರಮುಖ ವ್ಯಾಟಿಕನ್ ಶೃಂಗಸಭೆಗಳನ್ನೂ ಅವರು ನಡೆಸಿದ್ದರು.

ಒಟ್ಟಾರೆಯಾಗಿ ಫ್ರಾನ್ಸಿಸ್ ಅವರನ್ನು ನಿಂತ ನೀರಾಗಿದ್ದ ಜಾಗತಿಕ ಚರ್ಚ್‌ ಅನ್ನು ಆಧುನಿಕ ಜಗತ್ತಿಗೆ ತೆರೆಯಲು ಪ್ರಯತ್ನಿಸಿದ್ದ ವ್ಯಕ್ತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ಪ್ರಮುಖ ನಿರ್ಧಾರಗಳಲ್ಲಿ ಅವರು ಪ್ರಕರಣಗಳ ಆಧಾರದಲ್ಲಿ ಸಲಿಂಗ ದಂಪತಿಗಳನ್ನು ಆಶೀರ್ವದಿಸಲು ಪಾದ್ರಿಗಳಿಗೆ ಅನುಮತಿ ನೀಡಿದ್ದರು ಮತ್ತು ಮೊದಲ ಬಾರಿಗೆ ವ್ಯಾಟಿಕನ್ ಕಚೇರಿಗಳ ನಾಯಕಿಯರಾಗಿ ಸೇವೆ ಸಲ್ಲಿಸಲು ಮಹಿಳೆಯರನ್ನು ನೇಮಕಗೊಳಿಸಿದ್ದರು.

►ನೊಂದವರಿಗೆ ಭರವಸೆಯ ಚೇತನವಾಗಿದ್ದರು: ಪ್ರಧಾನಿ ಮೋದಿ ಸಂತಾಪ

ಪೋಪ್ ಫ್ರಾನ್ಸಿಸ್ ಅವರ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಪ್ರಧಾನಿ ಮೋದಿ ಸಂತಾಪವನ್ನು ಸೂಚಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಪೋಪ್ ಫ್ರಾನ್ಸಿಸ್ ಅವರ ಅಗಲಿಕೆ ತೀವ್ರ ದುಃಖ ತಂದಿದೆ. ಈ ದುಃಖದ ಸಂದರ್ಭದಲ್ಲಿ ಜಾಗತಿಕ ಕೆಥೊಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸಹಾನುಭೂತಿ, ನಮ್ರತೆ ಮತ್ತು ಆಧ್ಯಾತ್ಮಿಕ ದಾರಿದೀಪವಾಗಿ ಪೋಪ್ ಫ್ರಾನ್ಸಿಸ್ ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಅವರು ಕ್ರೈಸ್ತರ ಆದರ್ಶಗಳನ್ನು ಅರಿತುಕೊಂಡರು. ಅವರು ಶ್ರದ್ಧೆಯಿಂದ ಬಡವರ ಸೇವೆ ಮಾಡಿದರು. ನೊಂದವರಿಗೆ ಭರವಸೆಯ ಚೇತನವಾದರು’ ಎಂದು ಪ್ರಧಾನಿ ಹೇಳಿದ್ದಾರೆ.

‘ನಾನು ಅವರನ್ನು ಭೇಟಿ ಮಾಡಿದ ಕ್ಷಣವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದೇನೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯವನ್ನು ಯಾವಾಗಲೂ ಗೌರವಿಸಲಾಗುತ್ತದೆ. ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲಿ’ ಎಂದು ಮೋದಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News