ಗಾಝಾದಲ್ಲಿ ಕದನವಿರಾಮ ಪ್ರಸ್ತಾವಕ್ಕೆ ಹಮಾಸ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ: ಖತರ್
ದೋಹಾ: ಗಾಝಾದಲ್ಲಿ ಕದನವಿರಾಮ ಘೋಷಿಸುವ ಹಾಗೂ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಕುರಿತಾದ ಯೋಜನೆಗೆ ಹಮಾಸ್ ನ ಪ್ರತಿಕ್ರಿಯೆ ಸಾಮಾನ್ಯವಾಗಿ ಸಕಾರಾತ್ಮಕವಾಗಿದೆ ಎಂದು ಖತರ್ ನ ಪ್ರಮುಖ ಸಂಧಾನಕಾರರೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದೋಹಾದಲ್ಲಿ ಮಂಗಳವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕತರ್ನ ಪ್ರಧಾನಿ ಶೇಖ್ ಮೊಹಮ್ಮದ್ ಇನ್ ಅಬ್ದುರ್ರಹ್ಮಾನ್ ಅವರು, ಇಸ್ರೇಲಿ ನಾಯಕರು ಬುಧವಾರ ತನ್ನನ್ನು ಭೇಟಿಯಾಗಲಿದ್ದು ಆಗ ಅವರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮವೇರ್ಪಡಿಸುವ ನಿಟ್ಟಿನಲ್ಲಿ ಈಜಿಪ್ಟ್ ಹಾಗೂ ಅಮೆರಿಕ ಜೊತೆಗೂಡಿ ಕತರ್ ದೇಶವು ದೀರ್ಘ ಸಮಯದಿಂದ ಶ್ರಮಿಸುತ್ತಿದೆ.
ಖತರ್ ನ ನೂತನ ಪ್ರಸ್ತಾವಕ್ಕೆ ತಾನು ಸಕಾರಾತ್ಮಕವಾದ ಆಶಯದೊಂದಿಗೆ ಪ್ರತಿಕ್ರಿಯಿಸಿರುವುದಾಗಿ ಹಮಾಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಆದರೆ ನಮ್ಮ ಜನತೆಯ ವಿರುದ್ಧ ನಡೆಯುತ್ತಿರುವ ಆಕ್ರಮಣವನ್ನು ಕೊನೆಗೊಳಿಸಲು ಸಮಗ್ರ ಹಾಗೂ ಸಂಪೂರ್ಣವಾದ ಕದನವಿರಾಮವೇರ್ಪಡಬೇಕಾದ ಅಗತ್ಯವಿದೆ’’ ಎಂದು ಹೇಳಿದೆ. ತನ್ನ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕಾದರೆ ಇಸ್ರೇಲ್ ನಲ್ಲಿರುವ ಗಣನೀಯ ಸಂಖ್ಯೆಯ ಫೆಲೆಸ್ತೀನ್ ಕೈದಿಗಳನ್ನು ಬಂಧಮುಕ್ತಗೊಳಿಸಬೇಕೆಂಬ ಬೇಡಿಕೆಯನ್ನು ಕೂಡಾ ಹಮಾಸ್ ಮುಂದಿಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇವೆರಡೂ ಬೇಡಿಕೆಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಹಮಾಸ್ ವಿರುದ್ಧ ಸಂಪೂರ್ಣ ವಿಜಯವನ್ನು ಸಾಧಿಸುವವರೆಗೆ ಹಾಗೂ ಎಲ್ಲಾ ಒತ್ತೆಯಾಳುಗಳನ್ನು ಹಸ್ತಾಂತರಿಸುವವರೆಗೆ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ. ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಅಮೆರಕದ ಕರೆಯನ್ನು ಕೂಡಾ ಅವರು ತಳ್ಳಿಹಾಕಿದ್ದಾರೆ.