ಚೀನಾದ ಒತ್ತಡಗಳಿಗೆ ತೈವಾನ್ ಮಣಿಯದು : ಅಧ್ಯಕ್ಷ ಲಾಯಿಚಿಂಗ್

Update: 2024-06-20 16:40 GMT

ಲಾಯಿಚಿಂಗ್ | PC : ANI  

ತೈಪೆ : ತೈವಾನ್ ಶರಣಾಗಬೇಕೆಂದು ಚೀನಾವು ಒತ್ತಡ ಹೇರುತ್ತಿದೆ. ಆದರೆ ಅಂತಹ ಒತ್ತಡಗಳಿಗೆ ಅದು ಮಣಿಯಲಾರದು ಎಂದು ತೈವಾನ್ ಅಧ್ಯಕ್ಷ ಲಾಯಿ ಚಿಂಗ್-ಟೆ ಹೇಳಿದ್ದಾರೆ.

ಚೀನಾದ ಬೆದರಿಕೆಯ ವಿರುದ್ಧ ತೈವಾನ್ ರಕ್ಷಣಾ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯನ್ನು ಪುನರುಚ್ಚರಿಸಿದ ಅವರು ತೈವಾನ್‌ನ ರಕ್ಷಣೆಗೆ ಅಮೆರಿ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ತೈವಾನ್ ಜನತೆ ಶಾಂತಿ ಪ್ರಿಯರು ಹಾಗೂ ಇತರರ ಬಗ್ಗೆ ದಯಾಭರಿತರಾಗಿದ್ದಾರೆ. ಆದರೆ ಶಾಂತಿ ಉಳಿಯಬೇಕಾದರೆ ಶಕ್ತಿಯ ಬೆಂಬಲ ಅಗತ್ಯ. ಸರ್ವಸನ್ನದ್ಧತೆಯು ಶಾಂತಿಯನ್ನು ಸಾಧಿಸುವುದು ಸಂಘರ್ಷವನ್ನು ತಪ್ಪಿಸುವ ಒಂದು ಮಾರ್ಗವಾಗಿದೆ’’ ಎಂದವರು ಹೇಳಿದರು.

ಮಂಗಳವಾರ ಅಮೆರಿಕದ ರಕ್ಷಣಾ ಕಾರ್ಯಾಲಯವಾದ ಪೆಂಟಗಾನ್ ತೈವಾನ್‌ಗೆ 300 ದಶಲಕ್ಷ ಡಾಲರ್ ಮೊತ್ತದ ಮಾನವವರಹಿತ ವೈಮಾನಿಕ ವಾಹನ ಹಗೂ 60.2 ದಶಲಕ್ಷ ಡಾಲರ್ ಮೌಲ್ಯ 700 ‘ಸ್ವಿಚ್‌ಬ್ಲೇಡ್’ ನಿಖರ ದಾಳಿಯ ಕ್ಷಿಪಣಿಗಳನ್ನು ಒದಗಿಸುವುದಕ್ಕೆ ತನ್ನ ಅನುಮೋದನೆಯನ್ನು ನೀಡಿತ್ತು.

ತೈವಾನ್ ಸುತ್ತ ಚೀನಾದ ಕಮ್ಯೂನಿಸ್ಟ್ ಪಕ್ಷವು ಆಗಾಗ್ಗೆ ಸೇನಾ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಶತ್ರುವಿನ ಬೆದರಿಕೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವಂತಹ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅಮೆರಿಕವು ಒಪ್ಪಿಕೊಂಡಿದೆಯೆಂದು ತೈವಾನ್‌ನ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾದಿಂದ 180 ಕಿ.ಮೀ. ವಿಸ್ತೀರ್ಣದ ಕಿರಿದಾದ ಜಲಸಂಧಿಯಿಂದ ಪ್ರತ್ಯೇಕಿಸಲ್ಪಟ್ಟಿರುವ ತೈವಾನ್ ಸ್ವಂತ ಸರಕಾರ, ಸೇನೆ ಹಾಗೂ ಕರೆನ್ಸಿಯನ್ನು ಹೊಂದಿದೆ. ತೈವಾನ್ ಪ್ರತ್ಯೇಕತೆಯನ್ನು ಮಾನ್ಯ ಮಾಡಲು ಚೀನಾ ನಿರಾಕರಿಸುತ್ತಿದೆ. ಅಗತ್ಯವಿದ್ದಲ್ಲಿ ಬಲಪ್ರಯೋಗದಿಂದಾದರೂ ಅದನ್ನು ವಶಪಡಿಸಿಕೊಳ್ಳಲು ಹಿಂಜರಿಯುವುದಿಲ್ಲವೆಂದು ಚೀನಾ ಹೇಳಿಕೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News