ಕೆನಡಾದಲ್ಲಿ ಮಳೆ, ಪ್ರವಾಹ: ಜನಜೀವನ ಅಸ್ತವ್ಯಸ್ತ
Update: 2024-07-17 16:02 GMT
ಟೊರಂಟೊ, ಜು.17: ಕೆನಡಾದ ವಾಣಿಜ್ಯ ಕೇಂದ್ರ ಟೊರಂಟೊದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಪ್ರಮುಖ ಹೆದ್ದಾರಿ, ರಸ್ತೆಗಳು, ರೈಲು ಮಾರ್ಗಗಳು ಜಲಾವೃತಗೊಂಡಿದ್ದು ಸಂಚಾರ ವ್ಯವಸ್ಥೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾರ್ವಜನಿಕ ಪ್ರದೇಶಗಳು ನೆರೆ ನೀರಿನಲ್ಲಿ ಮುಳುಗಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಟೊರಂಟೋದ ಸುಮಾರು 1,23,000 ನಿವಾಸಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಟೊರಂಟೊ ಬಳಿಯ ದ್ವೀಪದಲ್ಲಿರುವ ಬಿಲ್ಲೀ ಬಿಷಪ್ ವಿಮಾನ ನಿಲ್ದಾಣದ ನೆಲ ಅಂತಸ್ತು ಜಲಾವೃತಗೊಂಡಿದ್ದು ಪ್ರಯಾಣಿಕರ ಟರ್ಮಿನಲ್ಗೆ ನೀರು ನುಗ್ಗಿದ್ದರಿಂದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕನಿಷ್ಟ 8 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.