ಪನ್ನೂನ್ ಹತ್ಯೆ ಸಂಚು ಪ್ರಕರಣದಲ್ಲಿ ʼರಾʼ ಅಧಿಕಾರಿ ಕೈವಾಡ: ವರದಿ
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆ ನಿಂತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ಆರ್ಎಡಬ್ಲ್ಯು) ಅಧಿಕಾರಿ ವಿಕ್ರಮ್ ಯಾದವ್, ಬಾಡಿಗೆ ಹಂತಕರಿಗೆ ಸೂಚನೆ ನೀಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
"ಪನ್ನೂನ್ ಅವರನ್ನು ಗುರಿ ಮಾಡಿದ ಕಾರ್ಯಾಚರಣೆಯನ್ನು ಆ ಸಮಯದಲ್ಲಿ ರಾ ಮುಖ್ಯಸ್ಥರಾಗಿದ್ದ ಸಮಂತ್ ಗೋಯಲ್ ಅನುಮೋದಿಸಿದ್ದರು ಎಂದು ಅಮೆರಿಕದ ಗುಪ್ತಚರ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕಳೆದ ವರ್ಷ ಪನ್ನೂನ್ ಪ್ರಕರಣ ಬೆಳಕಿಗೆ ಬಂದ ಬಳಿಕ ಯಾದವ್ ಅವರನ್ನು ಸಿಆರ್ ಪಿಎಫ್ ಗೆ ವಾಪಾಸು ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ಆದರೆ ಈ ವರದಿ ಬಗ್ಗೆ ಭಾರತ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಪ್ರಜೆ ನಿಖಿಲ್ ಗುಪ್ತಾ ಈ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ ಎಂಬ ಸುಳಿವನ್ನು ಅಮೆರಿಕದ ಅಧಿಕಾರಿಗಳು ಕಳೆದ ವರ್ಷ ನೀಡಿದ್ದರು. ಭಾರತೀಯ ಅಧಿಕಾರಿಗಳ ಸೂಚನೆ ಮೇರೆಗೆ ಅವರು ಕಾರ್ಯ ನಿರ್ವಹಿಸಿದ್ದರು ಎಂದು ಆಪಾದಿಸಲಾಗಿತ್ತು.
ಝೆಕ್ ಮತ್ತು ಅಮೆರಿಕದ ಏಜೆನ್ಸಿಗಳು ಕಳೆದ ವರ್ಷ ಬಂಧಿಸಿದ ಬಳಿಕ ಗುಪ್ತಾ ಪರುಗ್ವೆಯ ಜೈಲಿನಲ್ಲಿದ್ದಾರೆ. ಆ ಬಳಿಕ ಭಾರತ ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಭಾರತೀಯ ಅಧಿಕಾರಿಗಳ ಪಾತ್ರ ಕುರಿತಂತೆ ಅಮೆರಿಕ ಹಂಚಿಕೊಂಡ ಮಾಹಿತಿಗಳ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಿದ್ದರೂ, ಇದು ಭಾರತದ ಭದ್ರತೆಗೆ ಸಂಬಂಧಪಟ್ಟ ವಿಚಾರ ಎಂದು ಹೇಳಿ ಈ ಸಂಬಂಧ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.