2 ಸಾವಿರ ವರ್ಷ ಹಿಂದಿನ ಕೃತಿಯನ್ನು ಎಐ ಬಳಸಿ ಓದಿದ ಸಂಶೋಧಕರು

Update: 2024-02-06 16:04 GMT

Photo:NDTV

ವಾಷಿಂಗ್ಟನ್ : ಸುಮಾರು 2 ಸಾವಿರ ವರ್ಷಗಳ ಹಿಂದೆ ಇಟಲಿಯ ವೆಸುವಿಯಸ್ ಪರ್ವತದ ಜ್ವಾಲಾಮುಖಿಯಲ್ಲಿ ಸುಟ್ಟುಹೋಗಿದ್ದ ಗ್ರೀಕ್ ಗ್ರಂಥದ ಬೂದಿಯನ್ನು ಕೃತಕ ಬುದ್ಧಿಮತ್ತೆ(ಎಐ) ಬಳಸಿ ಓದಿದ ಮೂವರು ಸಂಶೋಧಕರು 7 ಲಕ್ಷ ಡಾಲರ್ ಬಹುಮಾನ ಪಡೆದಿದ್ದಾರೆ.

ಸುಮಾರು 2 ಸಾವಿರ ವರ್ಷಗಳ ಹಿಂದೆ ವೆಸುವಿಯಸ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಪುರಾತನ ರೋಮನ್ ನಗರ ಪಾಂಪೈ ಬಿಸಿ ಬೂದಿಯಡಿ ಹೂತುಹೋಗಿತ್ತು. ಆಗ ಪುರಾತನ ಗ್ರಂಥದ 800 ಹಾಳೆಗಳು ಬೂದಿಯಡಿ ಸೇರಿತ್ತು. ಜ್ವಾಲಾಮುಖಿ ತಣಿದ ಬಳಿಕ ಗ್ರಂಥದ ಇದ್ದಲಿನ ಸಾರವನ್ನು ಸಂಗ್ರಹಿಸಿ ಇಟಲಿಯ ನೇಪಲ್ಸ್‍ನಲ್ಲಿನ ನ್ಯಾಷನಲ್ ಲೈಬ್ರೆರಿ ಮತ್ತು ಫ್ರಾನ್ಸ್‍ನ ಪ್ಯಾರಿಸ್ ಇನ್ಸ್‍ಟಿಟ್ಯೂಟ್‍ನಲ್ಲಿ ಸಂರಕ್ಷಿಸಿ ಇಡಲಾಗಿದೆ. ಇದ್ದಲಿನ ಸಾರವನ್ನು ಪರಿಶೀಲಿಸಿ ಗ್ರಂಥದ ಬಗ್ಗೆ ಮಾಹಿತಿ ಪಡೆಯಲು ಸಂಶೋಧಕರು ಪ್ರಯತ್ನಿಸುತ್ತಿದ್ದು ಗ್ರಂಥವನ್ನು ಓದಿದವರಿಗೆ 1 ದಶಲಕ್ಷ ಡಾಲರ್ ನಷ್ಟು ಬಹುಮಾನ ನೀಡುವುದಾಗಿ ಆಯೋಜಕರು ಘೋಷಿಸಿದ್ದರು.

ಇದೀಗ ಜರ್ಮನಿಯ ಬರ್ಲಿನ್‍ನಲ್ಲಿ ಪಿಎಚ್‍ಡಿ ವಿದ್ಯಾರ್ಥಿಯಾಗಿರುವ ಯೂಸುಫ್ ನಾದೆರ್, ಅಮೆರಿಕದ ನೆಬ್ರಾಸ್ಕದಲ್ಲಿನ ವಿದ್ಯಾರ್ಥಿ ಲ್ಯೂಕ್ ಫ್ಯಾರಿಟರ್, ಸ್ವಿಝರ್‍ಲ್ಯಾಂಡ್‍ನ ವಿದ್ಯಾರ್ಥಿ ಜೂಲಿಯನ್ ಶ್ಲಿಂಗರ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. `ಈ ಪಠ್ಯಗಳಲ್ಲಿನ ಕೆಲವು ಪ್ರಾಚೀನ ಪ್ರಪಂಚದ ಪ್ರಮುಖ ಅವಧಿಗಳ ಇತಿಹಾಸವನ್ನು ಸಂಪೂರ್ಣವಾಗಿ ಪುನಃ ಬರೆಯಬಹುದು. ಎಂದಿಗೂ ನೋಡದ ಪ್ರಾಚೀನ ಗ್ರಂಥಗಳ ಮರು ಪಡೆಯುವಿಕೆ ಒಂದು ದೊಡ್ಡ ಪ್ರಗತಿಯಾಗಿದೆ' ಎಂದು ಅಮೆರಿಕದ ಕೆಂಟುಕಿ ವಿವಿಯ ಕಂಪ್ಯೂಟರ್ ವಿಜ್ಞಾನಿ ಬ್ರೆಂಟ್ ಸೀಲ್ಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News