ಇಸ್ರೇಲ್ ಮೇಲೆ ಹೌದಿಗಳ ಕ್ಷಿಪಣಿ ದಾಳಿ : 16 ಮಂದಿಗೆ ಗಾಯ
Update: 2024-12-21 17:43 GMT
ಜೆರುಸಲೇಂ : ಯೆಮನ್ ನಿಂದ ಪ್ರಯೋಗಿಸಲಾದ ಕ್ಷಿಪಣಿಯನ್ನು ತುಂಡರಿಸಲು ವಿಫಲವಾಗಿರುವುದರಿಂದ ಮಧ್ಯ ಇಸ್ರೇಲ್ ಟೆಲ್ಅವೀವ್ ಜಿಲ್ಲೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಶನಿವಾರ ಹೇಳಿದೆ.
ಮಧ್ಯ ಇಸ್ರೇಲ್ ನಲ್ಲಿ ಸೈರನ್ ಮೊಳಗಿದ ಬಳಿಕ ಯೆಮನ್ನಿಂದ ಪ್ರಯೋಗಿಸಲಾದ ಒಂದು ಕ್ಷಿಪಣಿಯನ್ನು ಗುರುತಿಸಲಾಯಿತು. ಆದರೆ ತುಂಡರಿಸುವ ಪ್ರಯತ್ನ ವಿಫಲವಾಗಿದ್ದು ಟೆಲ್ಅವೀವ್ ನ ಪೂರ್ವದ ಬೆನೆಯ್ ಬ್ರಾಕ್ ನಗರಕ್ಕೆ ಅಪ್ಪಳಿಸಿದೆ. ಗಾಯಗೊಂಡಿರುವ 16 ಮಂದಿಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಟೆಲ್ಅವೀವ್ ನ `ಆಕ್ರಮಿತ' ಪ್ರದೇಶದಲ್ಲಿ ಶತ್ರುವಿನ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್ ನ ಹೌದಿ ಬಂಡುಕೋರರು ಶನಿವಾರ ಹೇಳಿದ್ದಾರೆ.