ಉಕ್ರೇನ್ ಮೇಲೆ ಡ್ರೋನ್ ಮಳೆಗರೆದ ರಶ್ಯ ; ನಾಗರಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ

Update: 2025-03-19 21:01 IST
ಉಕ್ರೇನ್ ಮೇಲೆ ಡ್ರೋನ್ ಮಳೆಗರೆದ ರಶ್ಯ ; ನಾಗರಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ

ಸಾಂದರ್ಭಿಕ ಚಿತ್ರ - AI

  • whatsapp icon

ಕೀವ್: ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗೆ 30 ದಿನಗಳ ತಾತ್ಕಾಲಿಕ ವಿರಾಮ ನೀಡುವ ಅಮೆರಿಕದ ಪ್ರಸ್ತಾಪವನ್ನು ಬೆಂಬಲಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ ಕೆಲವೇ ಕ್ಷಣಗಳಲ್ಲಿ ರಶ್ಯದ ಪಡೆ ಉಕ್ರೇನ್ ಮೇಲೆ ಡ್ರೋನ್‍ಗಳ ಸುರಿಮಳೆಗರೆದಿರುವುದಾಗಿ ವರದಿಯಾಗಿದೆ.

ರಶ್ಯವು ಕದನ ವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿರುವುದನ್ನು ಹೊಸ ದಾಳಿಗಳು ಸೂಚಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಪ್ರತಿಕ್ರಿಯಿಸಿದ್ದಾರೆ.

ಈಶಾನ್ಯ ಉಕ್ರೇನ್‍ನ ಸುಮಿ ನಗರದಲ್ಲಿರುವ ಆಸ್ಪತ್ರೆಯ ಮೇಲೆ ಮಂಗಳವಾರ ರಾತ್ರಿ ರಶ್ಯದ ಡ್ರೋನ್ ಬಾಂಬ್ ದಾಳಿ ನಡೆಸಿದೆ. ನಾಗರಿಕ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ರಶ್ಯ ದಾಳಿ ನಡೆಸುತ್ತಿದ್ದು ಸ್ಲೊವ್ಯಾಂಸ್ಕ್ ನಗರದಲ್ಲಿ ವಿದ್ಯುತ್ ಮೂಲಸೌಕರ್ಯಗಳಿಗೆ ಹಾನಿಯಾಗಿರುವುದರಿಂದ ನಗರದ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಡೊನೆಟ್ಸ್ಕ್ ಪ್ರಾಂತ, ಕೀವ್, ಝಿಟೋಮಿರ್, ಸುಮಿ, ಚೆರ್ನಿಹಿವ್, ಪೋಲ್ಟಾವಾ, ಕಾರ್ಖಿವ್, ಕಿರೊವೊಹ್ರಾಡ್, ನಿಪ್ರೊಪೆಟ್ರೋವ್ಸ್ಕ್ ಮತ್ತು ಚೆರ್ಕಾಸಿ ಪ್ರಾಂತಗಳಲ್ಲಿಯೂ ರಶ್ಯ ಡ್ರೋನ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ರಶ್ಯವು 40ಕ್ಕೂ ಅಧಿಕ ಡ್ರೋನ್‍ಗಳನ್ನು ಪ್ರಯೋಗಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಹೇಳಿದ್ದಾರೆ. `ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ರಶ್ಯ ನಡೆಸಿದ ಭೀಕರ ದಾಳಿಯಲ್ಲಿ ನಮ್ಮ ಇಂಧನ ವ್ಯವಸ್ಥೆಗಳು, ನಮ್ಮ ಮೂಲಸೌಕರ್ಯಗಳು, ಉಕ್ರೇನಿಯನ್ನರ ಸಹಜ ಬದುಕು ನಾಶಗೊಂಡಿದೆ. ಈ ದಾಳಿಯ ಮೂಲಕ ಸಂಪೂರ್ಣ ಕದನ ವಿರಾಮ ಪ್ರಸ್ತಾಪವನ್ನು ಪುಟಿನ್ ಸ್ಪಷ್ಟವಾಗಿ ನಿರಾಕರಿಸಿದಂತಾಗಿದೆ. ಯುದ್ಧವನ್ನು ಸಾಧ್ಯವಾದಷ್ಟು ಸಮಯ ಮುಂದುವರಿಸುವ ಪುಟಿನ್ ಪ್ರಯತ್ನವನ್ನು ಜಾಗತಿಕ ಸಮುದಾಯ ತಿರಸ್ಕರಿಸಲು ಇದು ಸಕಾಲವಾಗಿದೆ ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.

ಈ ಮಧ್ಯೆ, ಅಝೋವ್ ಸಮುದ್ರದ ಸಮೀಪದ ಹಲವು ಪ್ರದೇಶಗಳ ಮೇಲೆ ಉಕ್ರೇನ್ ಪ್ರಯೋಗಿಸಿದ 57 ಡ್ರೋನ್‍ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. 2014ರಲ್ಲಿ ಉಕ್ರೇನ್‍ನಿಂದ ವಶಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತದಲ್ಲಿ ಉಕ್ರೇನ್‍ನ ಡ್ರೋನ್ ದಾಳಿಯಲ್ಲಿ ತೈಲ ಡಿಪೋಗೆ ಹಾನಿಯಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಬುಧವಾರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News