ಚೀನಾ-ಭಾರತ ಸಂಬಂಧ ಉತ್ತಮವಾಗಿಲ್ಲ: ವಿದೇಶಾಂಗ ಸಚಿವ ಜೈಶಂಕರ್

Update: 2024-07-29 15:59 GMT

ವಿದೇಶಾಂಗ ಸಚಿವ ಜೈಶಂಕರ್ | PC : PTI

ಟೋಕಿಯೊ : ಚೀನಾದೊಂದಿಗಿನ ಭಾರತದ ಗಡಿವಿವಾದದಲ್ಲಿ ಮೂರನೇ ಪಕ್ಷದ ಪಾತ್ರವನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ತಳ್ಳಿಹಾಕಿದ್ದಾರೆ.

ಭಾರತ-ಚೀನಾ ನಡುವಿನ ಸಮಸ್ಯೆಯಲ್ಲಿ ಇತರರ ಮಧ್ಯಪ್ರವೇಶದ ಅಗತ್ಯವಿಲ್ಲ. ಇಬ್ಬರು ನೆರೆಹೊರೆಯವರ ನಡುವಿನ ಸಮಸ್ಯೆಯನ್ನು ಅವರೇ ಪರಿಹರಿಸಿಕೊಳ್ಳುತ್ತಾರೆ ಎಂದು ಟೋಕಿಯೋದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಜೈಶಂಕರ್ ಹೇಳಿದ್ದಾರೆ.

ಜಪಾನ್‍ನಲ್ಲಿ ನಡೆಯುತ್ತಿರುವ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಂಡಿರುವ ಜೈಶಂಕರ್, ಚೀನಾದೊಂದಿಗಿನ ಭಾರತದ ಸಂಬಂಧ ಉತ್ತಮವಾಗಿಲ್ಲ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

ನಮ್ಮಿಬ್ಬರ ನಡುವೆ, ಅಂದರೆ ಭಾರತ-ಚೀನಾ ನಡುವೆ ಸಮಸ್ಯೆಯಿದೆ. ಇದನ್ನು ಮಾತುಕತೆಯ ಮೂಲಕ ನಾವೇ ಪರಿಹರಿಸಿಕೊಳ್ಳಬೇಕಿದೆ. ನಿಸ್ಸಂಶಯವಾಗಿ, ಪ್ರಪಂಚದ ಇತರ ದೇಶಗಳು ಈ ವಿಷಯದಲ್ಲಿ ಆಸಕ್ತಿ ಹೊಂದಿವೆ. ಯಾಕೆಂದರೆ ನಾವು ಎರಡು ದೊಡ್ಡ ದೇಶಗಳು ಮತ್ತು ನಮ್ಮ ಸಂಬಂಧ ಪ್ರಪಂಚದ ಉಳಿದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ನಮ್ಮ ನಡುವಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಮಗೆ ಇತರ ದೇಶಗಳ ಸಹಾಯದ ಅಗತ್ಯವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಈ ತಿಂಗಳಿನಲ್ಲಿ ಜೈಶಂಕರ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿರನ್ನು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ವಾರ ಲಾವೋಸ್‍ನಲ್ಲಿ ನಡೆದಿದ್ದ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಹಾಗೂ ಜುಲೈ 4ರಂದು ಕಝಕ್‍ಸ್ತಾನದಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ನೇಪಥ್ಯದಲ್ಲಿ ಇಬ್ಬರೂ ಗಡಿವಿವಾದ ಪರಿಹರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News