ಪಾಕಿಸ್ತಾನ | ಹಿಂಸೆಗೆ ತಿರುಗಿದ ಪ್ರತಿಭಟನೆ ; 6 ಭದ್ರತಾ ಸಿಬ್ಬಂದಿ ಮೃತ್ಯು ; 100 ಮಂದಿಗೆ ಗಾಯ

Update: 2024-11-26 14:53 GMT

PC  :PTI

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಬೆಂಬಲಿಗರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಅರೆಸೇನಾ ಪಡೆಯ ನಾಲ್ಕು ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು ಪರಿಸ್ಥಿತಿ ನಿಯಂತ್ರಿಸಲು ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು ಕಂಡಲ್ಲಿ ಗುಂಡಿಕ್ಕಲು ಆದೇಶಿಸಿರುವುದಾಗಿ ಸರ್ಕಾರಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಇಸ್ಲಾಮಾಬಾದ್‍ನ ಡಿ-ಚೌಕದಲ್ಲಿ ಇಮ್ರಾನ್‍ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಾರ್ಟಿ(ಪಿಟಿಐ) ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಗೆ ಪಕ್ಷದ ಬೆಂಬಲಿಗರು ಆಗಮಿಸುವುದನ್ನು ತಡೆಯಲು ನಗರಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು ಹಲವೆಡೆ ಬ್ಯಾರಿಕೇಡ್ ಸ್ಥಾಪಿಸಲಾಗಿತ್ತು. ಸೋಮವಾರ ತಡರಾತ್ರಿ ಇಸ್ಲಾಮಾಬಾದ್‍ನ ಶ್ರೀನಗರ ಹೆದ್ದಾರಿಯಲ್ಲಿ ಕಾವಲು ನಿಂತಿದ್ದ ಅರೆಸೇನಾ ಪಡೆಯ (ಪಾಕಿಸ್ತಾನ್ ರೇಂಜರ್ಸ್) ಸಿಬ್ಬಂದಿಯ ಮೇಲೆ ವಾಹನ ನುಗ್ಗಿ 4 ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟರು.

ಇತರ 5 ಸಿಬ್ಬಂದಿ ಹಾಗೂ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಈ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ರಾವಲ್ಪಿಂಡಿ ಗಡಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಯತ್ತ ಕಲ್ಲುಗಳನ್ನು ಎಸೆದು ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು `ರೇಡಿಯೊ ಪಾಕಿಸ್ತಾನ್' ವರದಿ ಮಾಡಿದೆ.

 PC : PTI

ಇಸ್ಲಾಮಾಬಾದ್ ಹೊರವಲಯದಲ್ಲಿ ಸೋಮವಾರ ಪಿಟಿಐ ಬೆಂಬಲಿಗರ ಜತೆಗಿನ ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಪ್ರತಿಭಟನಾಕಾರರ ಕಲ್ಲೆಸೆತದಿಂದ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ತಲೆಗೆ ಗಂಭೀರ ಏಟು ಬಿದ್ದಿದೆ. ರಾಜಧಾನಿಯ ಉಪನಗರ ಸಂಜಾನಿಯಲ್ಲಿ ಪ್ರತಿಭಟನೆ ನಡೆಸಲು ಪರ್ಯಾಯ ಸ್ಥಳವನ್ನು ಸರಕಾರ ಸೂಚಿಸಿತ್ತು ಮತ್ತು ಇಮ್ರಾನ್‍ಖಾನ್ ಅವರೂ ಇದಕ್ಕೆ ಒಪ್ಪಿದ್ದರು ಎಂದು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೇನೆಯನ್ನು ನಿಯೋಜಿಸಲಾಗಿದ್ದು ದುಷ್ಕರ್ಮಿಗಳು ಹಾಗೂ ದಾಂಧಲೆಯಲ್ಲಿ ತೊಡಗಿದವರನ್ನು `ಕಂಡಲ್ಲಿ ಗುಂಡಿಕ್ಕಲು' ಸ್ಪಷ್ಟ ಆದೇಶ ನೀಡಲಾಗಿದೆ ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ. ಪ್ರತಿಭಟನೆಯ ಸಂದರ್ಭ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಮೇಲಿನ ದಾಳಿಯನ್ನು ಪ್ರಧಾನಿ ಶಹಬಾಝ್ ಷರೀಫ್ ಖಂಡಿಸಿದ್ದು ಘಟನೆಯಲ್ಲಿ ಪಾಲ್ಗೊಂಡವರನ್ನು ಗುರುತಿಸಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.

 PC : PTI

` ಶಾಂತಿಯುತ ಪ್ರತಿಭಟನೆಯ ನೆಪದಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಮೇಲೆ ನಡೆಸಿದ ದಾಳಿ ಖಂಡನೀಯವಾಗಿದೆ. ಅರಾಜಕತಾವಾದಿ ಗುಂಪು ರಕ್ತಪಾತವನ್ನು ಬಯಸುತ್ತದೆ. ಆದರೆ ಯಾವುದೇ ರೀತಿಯ ದಾಂಧಲೆ ಅಥವಾ ರಕ್ತಪಾತಕ್ಕೆ ಪಾಕಿಸ್ತಾನದಲ್ಲಿ ಅವಕಾಶವಿಲ್ಲ. ನೀಚ ರಾಜಕೀಯ ಕಾರ್ಯಸೂಚಿಗಾಗಿ ರಕ್ತಪಾತ ನಡೆಸುವುದು ಸ್ವೀಕಾರಾರ್ಹವಲ್ಲ' ಎಂದು ಅವರು ಹೇಳಿದ್ದಾರೆ.

 PC : PTI

ಇಮ್ರಾನ್‍ಖಾನ್ ಬಿಡುಗಡೆಗೆ ಆಗ್ರಹಿಸಿ, ಇಮ್ರಾನ್ ಪತ್ನಿ ಬುಷ್ರಾ ಬೀಬಿ ನೇತೃತ್ವದಲ್ಲಿ ರವಿವಾರ ಪೇಷಾವರದಿಂದ ಇಸ್ಲಾಮಾಬಾದ್‍ಗೆ ಆರಂಭಗೊಂಡಿದ್ದ ಜಾಥಾ ಎಲ್ಲಾ ಅಡೆತಡೆಗಳನ್ನೂ ದಾಟಿಕೊಂಡು ಸೋಮವಾರ ತಡರಾತ್ರಿ ಇಸ್ಲಾಮಾಬಾದ್ ನಗರವನ್ನು ಪ್ರವೇಶಿಸಿತ್ತು. ಈ ಸಂದರ್ಭ ಪೊಲೀಸರು ಲಾಠಿಜಾರ್ಜ್, ಅಶ್ರುವಾಯು ಮತ್ತು ಗೋಲೀಬಾರ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದಾಗ ಇಬ್ಬರು ಪಿಟಿಐ ಕಾರ್ಯಕರ್ತರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.  

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News