ಸಿಂಗಾಪುರ: ಕೋವಿಡ್ ಪ್ರಕರಣ ಉಲ್ಬಣ; ಮಾಸ್ಕ್ ಧರಿಸಲು ಸಲಹೆ

Update: 2023-12-18 17:11 GMT

Photo : PTI 

ಸಿಂಗಾಪುರ: ಸಿಂಗಾಪುರದಲ್ಲಿ ಡಿಸೆಂಬರ್ 3ರಿಂದ 9ರವರೆಗಿನ ವಾರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ ದಾಖಲಾಗಿದ್ದು ಸೋಂಕಿತರ ಸಂಖ್ಯೆ 56,043ಕ್ಕೇರಿದ ಹಿನ್ನೆಲೆಯಲ್ಲಿ ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸೂಕ್ತ ವಾತಾಯನ(ಗಾಳಿ, ಬೆಳಕು) ವ್ಯವಸ್ಥೆಯಿಲ್ಲದ ಜನಸಂದಣಿ ಪ್ರದೇಶದಿಂದ ದೂರ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಡಿಸೆಂಬರ್ ಪ್ರಥಮ ವಾರದಲ್ಲಿ ಕೋವಿಡ್ ಸೋಂಕು ಪ್ರಕರಣ 56,043ಕ್ಕೆ ಹೆಚ್ಚಿದ್ದು, ಇದರ ಹಿಂದಿನ ವಾರ ಸೋಂಕಿತರ ಸಂಖ್ಯೆ 32,035ರಷ್ಟಿತ್ತು. ದೈನಂದಿನ ಸರಾಸರಿ ಆಸ್ಪತ್ರೆಗೆ ದಾಖಲಾತಿ ಪ್ರಮಾಣವೂ ಈ ಅವಧಿಯಲ್ಲಿ 350ಕ್ಕೆ ಏರಿದೆ(ಅದರ ಹಿಂದಿನ ವಾರ 225 ಆಗಿತ್ತು). ತುರ್ತು ನಿಗಾ ಘಟಕಕ್ಕೆ ದೈನಂದಿನ ದಾಖಲಾತಿ ಸಂಖ್ಯೆಯೂ 9ಕ್ಕೇರಿದೆ(ಈ ಹಿಂದೆ 4 ಆಗಿತ್ತು). ಸೋಂಕು ಉಲ್ಬಣಕ್ಕೆ ಬಿಎ.2.86 ಕೋವಿಡ್ ರೂಪಾಂತರದ ಉಪತಳಿ ಜೆಎನ್.1 ಕಾರಣವೆಂದು ಗುರುತಿಸಲಾಗಿದೆ. ಲಭ್ಯವಿರುವ ಅಂತರಾಷ್ಟ್ರೀಯ ಮತ್ತು ಸ್ಥಳೀಯ ದತ್ತಾಂಶಗಳ ಆಧಾರದ ಪ್ರಕಾರ, ಬಿಎ.2.86 ಅಥವಾ ಜೆಎನ್.1 ಇತರ ಪರಿಚಲನೆಯ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕ ಅಥವಾ ಹೆಚ್ಚು ತೀವ್ರವಾದ ರೋಗಗಳನ್ನು ಉಂಟುಮಾಡುವ ಸ್ಪಷ್ಟ ಸೂಚನೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಂಗಾಪುರದ ಎಕ್ಸ್‍ಪೋ ಸಭಾಂಗಣದಲ್ಲಿ ಹೆಚ್ಚುವರಿ `ಕೋವಿಡ್ ಚಿಕಿತ್ಸಾ ವ್ಯವಸ್ಥೆ'ಯನ್ನು ಸ್ಥಾಪಿಸಲಾಗಿದೆ. ತೀವ್ರ ಉಸಿರಾಟದ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಸಾರ್ವಜನಿಕರು ಮನೆಯಲ್ಲೇ ಇರುವಂತೆ ಮನವಿ ಮಾಡಲಾಗಿದ್ದು ಲಸಿಕೆಯಿಂದ ಆಗುವ ಪ್ರಯೋಜನದ ಬಗ್ಗೆ ಜನತೆಗೆ ಮನವರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News