ದಕ್ಷಿಣ ಕೊರಿಯಾ ಅಧ್ಯಕ್ಷರ ದೋಷಾರೋಪಣೆ | ಹೊಸ ನಿರ್ಣಯ ಮಂಡಿಸಿದ ವಿರೋಧ ಪಕ್ಷಗಳು
Update: 2024-12-12 15:31 GMT
ಸಿಯೋಲ್ : ದೇಶದಲ್ಲಿ ಮಿಲಿಟರಿ ಕಾನೂನು ಘೋಷಿಸಿದ ಪ್ರಕರಣದಲ್ಲಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್‍ರನ್ನು ದೋಷಾರೋಪಣೆಗೆ ಒಳಪಡಿಸಲು 6 ವಿರೋಧ ಪಕ್ಷಗಳು ಜಂಟಿ ನಿರ್ಣಯ ಮಂಡಿಸಿರುವುದಾಗಿ ದಕ್ಷಿಣ ಕೊರಿಯಾದ ಸಂಸತ್ತು ಹೇಳಿದೆ.
ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿ ಹಾಗೂ ಇತರ ಐದು ಸಣ್ಣ ವಿರೋಧ ಪಕ್ಷಗಳು ಗುರುವಾರ ಸಂಜೆ ದೋಷಾರೋಪಣೆ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಗೆ ಸಲ್ಲಿಸಿದ್ದು ಶನಿವಾರ (ಡಿಸೆಂಬರ್ 14ರಂದು) ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಮಿಲಿಟರಿ ಕಾನೂನು ಜಾರಿಗೊಳಿಸಿರುವುದನ್ನು ಆಡಳಿತದ ಕಾರ್ಯವೆಂದು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಯೂನ್ ಸುಕ್, ಬಂಡಾಯದ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮನ್ನು ದೋಷಾರೋಪಣೆಗೆ ಗುರಿಪಡಿಸುವ ಪ್ರಯತ್ನದ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.