ಅಪಾಯದ ಅಂಚಿನಲ್ಲಿ ದಕ್ಷಿಣ ಸುಡಾನ್: ವಿಶ್ವಸಂಸ್ಥೆ ಎಚ್ಚರಿಕೆ

Update: 2025-03-10 21:54 IST
ಅಪಾಯದ ಅಂಚಿನಲ್ಲಿ ದಕ್ಷಿಣ ಸುಡಾನ್: ವಿಶ್ವಸಂಸ್ಥೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ವಿಶ್ವಸಂಸ್ಥೆ: ದಕ್ಷಿಣ ಸುಡಾನ್‍ನ ಈಶಾನ್ಯ ಪ್ರಾಂತದಲ್ಲಿ ಇತ್ತೀಚಿನ ವಾರಗಳಲ್ಲಿ ಭುಗಿಲೆದ್ದಿರುವ ಘರ್ಷಣೆಯು ದೇಶವನ್ನು ಶಾಂತಿ ಮತ್ತು ಅಭಿವೃದ್ಧಿಯ ಪಥಕ್ಕೆ ತಂದಿರಿಸಲು ಹಲವಾರು ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನಗಳನ್ನು ನಿರರ್ಥಕಗೊಳಿಸಿದ್ದು ದೇಶವು ` ಆತಂಕಕಾರಿ ಆರ್ಥಿಕ ಹಿಂಜರಿತದ' ಅಂಚಿಗೆ ಬಂದು ತಲುಪಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಎಚ್ಚರಿಕೆ ನೀಡಿದೆ.

ಅಧ್ಯಕ್ಷ ಸಾಲ್ವ ಕೀರ್ ಮತ್ತು ಉಪಾಧ್ಯಕ್ಷ ರೀಕ್ ಮಚಾರ್ ನಡುವಿನ `ದುರ್ಬಲ' ಅಧಿಕಾರ ಹಂಚಿಕೆ ಒಪ್ಪಂದವನ್ನು ಅಪ್ಪರ್ ನೈಲ್ ರಾಜ್ಯದಲ್ಲಿ ಕೀರ್ ಹಾಗೂ ಮಚಾರ್‍ರನ್ನು ಬೆಂಬಲಿಸುವ ಪಡೆಗಳ ನಡುವಿನ ಘರ್ಷಣೆಯು ಅಪಾಯಕ್ಕೆ ಸಿಲುಕಿಸಿದೆ. ಶುಕ್ರವಾರ ದಕ್ಷಿಣ ಸುಡಾನ್‍ನಿಂದ ಯೋಧರನ್ನು ತೆರವುಗೊಳಿಸಲು ನಿಯೋಜಿಸಲಾಗಿದ್ದ ವಿಶ್ವಸಂಸ್ಥೆಯ ಹೆಲಿಕಾಪ್ಟರ್ ಮೇಲೆ ಉತ್ತರ ನಾಸಿರ್ ನಗರದಲ್ಲಿ ಶುಕ್ರವಾರ ಗುಂಡಿನ ದಾಳಿ ನಡೆದಿದ್ದು ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾನೆ. ಸೇನಾ ಪಡೆಯ ಜನರಲ್ ಕೂಡಾ ಮೃತಪಟ್ಟಿದ್ದು ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿಯೋಗ ಹೇಳಿದೆ.

ಈ ಘಟನೆಯು ದಕ್ಷಿಣ ಸುಡಾನ್‍ನಲ್ಲಿ ಹಲವು ವರ್ಷಗಳಿಂದ ಸಾಧಿಸಿದ ಪ್ರಗತಿಯನ್ನು ಅಳಿಸಿ ಹಾಕಿ ದೇಶವನ್ನು ಮತ್ತೊಮ್ಮೆ ಹಿಂಜರಿತದ ಅಪಾಯಕ್ಕೆ ದೂಡಿದ ಎಂದು ವಿಶ್ವಸಂಸ್ಥೆ ನಿಯೋಗದ ಅಧ್ಯಕ್ಷೆ ಯಾಸ್ಮಿನ್ ಸೂಕ ಕಳವಳ ವ್ಯಕ್ತಪಡಿಸಿದ್ದಾರೆ. ವಿಭಜನೆ ಮತ್ತು ಸಂಘರ್ಷಕ್ಕೆ ಉತ್ತೇಜನ ನೀಡುವ ಬದಲು, ನಾಯಕರು ತಕ್ಷಣ ಶಾಂತಿ ಪ್ರಕ್ರಿಯೆಯ ಕಡೆಗೆ ಗಮನ ಕೇಂದ್ರೀಕರಿಸಬೇಕು. ದಕ್ಷಿಣ ಸುಡಾನ್‍ನ ನಾಗರಿಕರ ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಗಮವಾಗಿ ಪರಿವರ್ತನೆಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಈ ಹಿಂದೆ ದೇಶವನ್ನು ಧ್ವಂಸಗೊಳಿಸಿದ `ಅಧಿಕಾರಕ್ಕಾಗಿ ಹೋರಾಟದ ಅವಧಿಗೆ' ದೇಶ ಮತ್ತೆ ಮರಳುವ ಅಪಾಯ ಎದುರಾಗಿದೆ. ದಕ್ಷಿಣ ಸುಡಾನೀಯರು ದೌರ್ಜನ್ಯ, ಹಕ್ಕುಗಳ ಉಲ್ಲಂಘನೆ ಹಾಗೂ ಗಂಭೀರ ಪ್ರಮಾಣದ ಅಪರಾಧ, ಆರ್ಥಿಕ ದುರುಪಯೋಗ ಮತ್ತು ಹದಗೆಡುತ್ತಿರುವ ಸುರಕ್ಷತೆಯ ಬಲಿಪಶುಗಳಾಗಿದ್ದಾರೆ. ಅವರು ಮತ್ತೊಂದು ಯುದ್ದವನ್ನು ಬಯಸುತ್ತಿಲ್ಲ, ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಬಾರ್ನೆ ಅಫಾಕೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News