ಸ್ಪೇನ್ | ಪ್ರವಾಹದಿಂದ ಮೃತರ ಸಂಖ್ಯೆ 95ಕ್ಕೆ ಏರಿಕೆ
ಮ್ಯಾಡ್ರಿಡ್ : ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಪೂರ್ವ ಸ್ಪೇನ್‍ನ ವಲೆನ್ಸಿಯಾ ಪ್ರಾಂತದಲ್ಲಿ ಮೃತರ ಸಂಖ್ಯೆ 95ಕ್ಕೆ ಏರಿದ್ದು ಹಲವು ಕಟ್ಟಡಗಳು ಮತ್ತು ಸೇತುವೆಗಳು ನೆರೆನೀರಲ್ಲಿ ಕೊಚ್ಚಿಹೋಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ವಲೆನ್ಸಿಯಾ ಪ್ರಾಂತದ ಕೆಲವು ಭಾಗಗಳಲ್ಲಿ 8 ಗಂಟೆಗಳಲ್ಲಿ ಒಂದು ವರ್ಷದ ಪ್ರಮಾಣದಷ್ಟು ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಕಸಕಡ್ಡಿ, ಮರಗಳು ರಾಶಿ ಬಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ವಿಶ್ವದ ಪ್ರಮುಖ ಸಿಟ್ರಸ್ ಹಣ್ಣು(ಚಕ್ಕೋತ ಹಣ್ಣು) ರಫ್ತು ಮಾಡುವ ದೇಶವಾಗಿರುವ ಸ್ಪೇನ್‍ನಲ್ಲಿ ಸಿಟ್ರಸ್ ಹಣ್ಣಿನ ತೋಟಗಳು ನೀರಿನಲ್ಲಿ ಮುಳುಗಿ ವ್ಯಾಪಕ ನಷ್ಟ ಸಂಭವಿಸಿದೆ. ಹಲವು ಸೇತುವೆಗಳು ಕುಸಿದಿದ್ದು ವೆಲೆನ್ಸಿಯಾವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಜಲಾವೃತಗೊಂಡಿದೆ.
ಮ್ಯಾಡ್ರಿಡ್ ಮತ್ತು ಬಾರ್ಸೆಲೋನಾ ನಗರಗಳಲ್ಲಿ ರೈಲು ಸಂಚಾರ ರದ್ದುಗೊಂಡಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಇತರ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.