ಯುರೋಪಿನಲ್ಲಿ ಫ್ಲೂ, ಕೋವಿಡ್ ಉಲ್ಬಣ; ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸ್ಪೇನ್ ನಿರ್ಧಾರ
ಮ್ಯಾಡ್ರಿಡ್: ಯುರೋಪಿನಾದ್ಯಂತ ಫ್ಲೂ ಮತ್ತು ಕೋವಿಡ್ ಸೋಂಕಿನ ಪ್ರಕರಣಗಳು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸ್ಪೇನ್ ಹೇಳಿದೆ.
ಉಸಿರಾಟದ ಕಾಯಿಲೆ ಸೋಂಕಿನ ಪ್ರಮಾಣ ದಾಖಲೆ ಮಟ್ಟ ತಲುಪಿದೆ ಎಂದು ಇಟಲಿ ಸರಕಾರವೂ ಮಾಹಿತಿ ನೀಡಿದೆ.
ಅನಾರೋಗ್ಯ ಕಂಡುಬಂದರೆ ಮನೆಯಲ್ಲೇ ಇರಬೇಕು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಮಾಸ್ಕ್ ಧರಿಸಬೇಕು. ಸಾಮನ್ಯವಾಗಿ ಈ ವಲಯದಲ್ಲಿ ಡಿಸೆಂಬರ್ ಬಳಿಕ ಫ್ಲೂ ಪ್ರಕರಣ ಹೆಚ್ಚಿರುತ್ತದೆ. ಆದರೆ ಈ ವರ್ಷ ದಾಖಲೆ ಪ್ರಮಾಣದಲ್ಲಿದೆ ಎಂದು `ರೋಗ ನಿಯಂತ್ರಣ ಮತ್ತು ತಡೆಗಾಗಿನ ಯುರೋಪಿಯನ್ ಕೇಂದ್ರ' ಸಲಹೆ ನೀಡಿದೆ. ಕೋವಿಡ್-19ಕ್ಕೆ ಕಾರಣವಾಗುವ ಸಾರ್ಸ್-ಸಿಒವಿ-2 ವೈರಸ್ ಗಿಂತಲೂ ಅಪಾಯಕಾರಿ ಮಟ್ಟದಲ್ಲಿ ಫ್ಲೂ ಹರಡುತ್ತಿರುವುದರಿಂದ ದುರ್ಬಲ ಗುಂಪಿನವರು(ಹಿರಿಯರು ಮತ್ತು ಮಕ್ಕಳು) ಲಸಿಕೆ ಪಡೆಯುವುದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಹೇಳಿಕೆ ತಿಳಿಸಿದೆ.
ಕಳೆದ ವಾರವೇ ಸ್ಪೇನಿನ ಹಲವು ಪ್ರದೇಶಗಳ ಆಸ್ಪತ್ರೆಗಳಲ್ಲಿ ರೋಗಿಗಳು, ಸಂದರ್ಶಕರು ಹಾಗೂ ಸಿಬಂದಿಗಳಿಗೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ದೇಶದಾದ್ಯಂತ ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವ ಬಗ್ಗೆ ಕೇಂದ್ರ ಸರಕಾರ ಒಲವು ತೋರಿದ್ದರೂ ಪ್ರಾದೇಶಿಕ ಸರಕಾರಗಳು ಇದಕ್ಕೆ ಸಮ್ಮತಿಸಿಲ್ಲ. `ಮಾಸ್ಕ್ ಧರಿಸುವುದು ಸೋಂಕು ಹರಡದಂತೆ ಮತ್ತು ದುರ್ಬಲ ಜನರನ್ನು ರಕ್ಷಿಸುವ ಒಂದು ಮಾರ್ಗವಾಗಿದೆ' ಎಂದು ಸ್ಪೇನಿನ ಆರೋಗ್ಯ ಸಚಿವೆ ಮೋನಿಕಾ ಗಾರ್ಸಿಯಾ ಹೇಳಿದ್ದಾರೆ.
ಇಟಲಿಯಲ್ಲಿಯೂ ಕಳೆದ ತಿಂಗಳಾಂತ್ಯದಲ್ಲಿ ಫ್ಲೂ ಮತ್ತು ಕೋವಿಡ್-19 ಸೋಂಕಿನ ಪ್ರಮಾಣ ದಾಖಲೆ ಮಟ್ಟಕ್ಕೇರಿದೆ. ಲಸಿಕೆ ಪಡೆಯಲು ಕೆಲವೇ ಜನರು ಮುಂದಾಗಿರುವುದು ಮತ್ತು ಮಾಸ್ಕ್ ಧರಿಸುವುದನ್ನು ವಿರೋಧಿಸುತ್ತಿರುವುದು ಸೋಂಕಿನ ಪ್ರಮಾಣ ಉಲ್ಬಣಿಸಲು ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.
ಪೋರ್ಚುಗಲ್ ನಲ್ಲಿ ಕಳೆದ 3 ವಾರಗಳಿಂದ ಫ್ಲೂ ಪ್ರಕರಣ ದಿಢೀರನೆ ಹೆಚ್ಚಿದ್ದರೂ ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವ ಬಗ್ಗೆ ನಿರ್ಧರಿಸಿಲ್ಲ. ಆದರೆ ಜನದಟ್ಟಣೆಯ ಸ್ಥಳಗಳಿಗೆ ಹೋಗುವಾರ ಜನರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಡಿಸೆಂಬರ್ ಅಂತ್ಯದ ವಾರದಲ್ಲಿ ಸೋಂಕು ರೋಗದಿಂದ ತುರ್ತು ನಿಗಾ ಘಟಕಕ್ಕೆ ದಾಖಲಾದ ರೋಗಿಗಳ ಪ್ರಮಾಣ 17%ಕ್ಕೆ ಏರಿಕೆಯಾಗಿದೆ ಎಂದು ಪೋರ್ಚುಗಲ್ ಆರೋಗ್ಯ ಸಚಿವ ಮ್ಯಾನುವೆಲ್ ಫಿಝಾರೊ ಹೇಳಿದ್ದಾರೆ.
ವಿಶ್ವದ ಇತರ ಹಲವು ದೇಶಗಳಲ್ಲೂ ಕೋವಿಡ್ ಪ್ರಕರಣ ಹೆಚ್ಚಿದ್ದು ಅಮೆರಿಕದ 4 ರಾಜ್ಯಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.