ಸುಡಾನ್ | ಅರೆಸೇನಾ ಪಡೆಯ ದಾಳಿಯಲ್ಲಿ 18 ನಾಗರಿಕರು ಮೃತ್ಯು

Update: 2024-11-05 16:25 GMT

ಸಾಂದರ್ಭಿಕ ಚಿತ್ರ | PC :sudanow-magazine 

ಖಾರ್ಟೂಮ್ : ಮಧ್ಯ ಸುಡಾನ್ನ ಅಲ್-ಜಾಝ್ರಿಯಾ ರಾಜ್ಯದಲ್ಲಿ ಅರೆಸೇನಾ ಪಡೆ ರ‍್ಯಾಪಿಡ್‌ ಸಪೋರ್ಟ್ ಫೋರ್ಸ್(ಆರ್ಎಸ್ಎಫ್)ಯ ದಾಳಿಯಲ್ಲಿ ಕನಿಷ್ಠ 18 ನಾಗರಿಕರು ಹತರಾಗಿದ್ದಾರೆ ಎಂದು ಪ್ರಜಾಪ್ರಭುತ್ವ ಪರ ಕಾರ್ಯಕರ್ತರು ಮಂಗಳವಾರ ಹೇಳಿದ್ದಾರೆ.

ಅಲ್-ಜಾಝ್ರಿಯಾ ರಾಜ್ಯದ ಬರ್ಬೋರಾಬ್ ಗ್ರಾಮ ಹಾಗೂ ಅಲ್-ಖುರಾ ನಗರಕ್ಕೆ ಸೋಮವಾರ ರಾತ್ರಿ ನುಗ್ಗಿದ ಆರ್ಎಸ್ಎಫ್ ಯೋಧರು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಕನಿಷ್ಠ 18 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಆರ್ಎಸ್ಎಫ್ ಯೋಧರು ಲೂಟಿ , ಬೆದರಿಕೆ, ಬಲವಂತದ ಸ್ಥಳಾಂತರ ಇತ್ಯಾದಿ ಕೃತ್ಯಗಳನ್ನು ಮುಂದುವರಿಸಿದ್ದಾರೆ ಎಂದು ಸರಕಾರೇತರ ಸಂಘಟನೆ `ಸುಡಾನೀಸ್ ಡಾಕ್ಟರ್ಸ್ ನೆಟೆವರ್ಕ್' ಖಂಡಿಸಿದೆ.

ಸುಡಾನ್ನಲ್ಲಿ 2023ರ ಎಪ್ರಿಲ್ನಿಂದ ಸಶಸ್ತ್ರ ಪಡೆ ಹಾಗೂ ಆರ್ಎಸ್ಎಫ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ 20,000ಕ್ಕೂ ಅಧಿಕ ಪ್ರಜೆಗಳು ಸಾವನ್ನಪ್ಪಿದ್ದು 10 ದಶಲಕ್ಷಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿರುವುದಾಗಿ ವಿಶ್ವಸಂಸ್ಥೆಯ ವರದಿ ಉಲ್ಲೇಖಿಸಿದೆ. ಅಲ್-ಜಾಝ್ರಿಯಾ ರಾಜ್ಯದ ಪ್ರಭಾವೀ ಮುಖಂಡ, ಆರ್ಎಸ್ಎಫ್ ಬೆಂಬಲಿಗ ಅಬು ಅಕ್ಲಾ ಕಿಕಿಲ್ ಅಕ್ಟೋಬರ್ 20ರಂದು ಸೇನಾಪಡೆಗೆ ನಿಷ್ಠೆ ಬದಲಿಸಿದ ಬಳಿಕ ಈ ರಾಜ್ಯದಲ್ಲಿ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆಯ ನಡುವೆ ಘರ್ಷಣೆ ಭುಗಿಲೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News